ನವದೆಹಲಿ: ಶಾಲಾ ಗೆಳತಿಯೊಂದಿಗಿನ ಸ್ನೇಹದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಹಗಲು ಹೊತ್ತಿನಲ್ಲೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿರುವ ಘಟನೆ ದೆಹಲಿಯ ನಾಂಗ್ಲೋಯಿ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಮಧ್ಯಾಹ್ನ 15 ವರ್ಷದ ಬಾಲಕನು ಶಾಲೆಯಿಂದ ತನ್ನ ಗೆಳತಿ ಹಾಗೂ ಇತರ ಸ್ನೇಹಿತರೊಂದಿಗೆ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಾರ್ಗಮಧ್ಯೆ ಮೂವರು ಬಾಲಕರು ಅವರ ಹಾದಿ ತಡೆದು, ವಿದ್ಯಾರ್ಥಿನಿಯ ಬಳಿ ಸಂತ್ರಸ್ತ ಬಾಲಕನೊಂದಿಗಿನ ಸ್ನೇಹದ ಕುರಿತು ಪ್ರಶ್ನಿಸಿ ತಕರಾರು ತೆಗೆದಿದ್ದಾರೆ. ಆರಂಭದಲ್ಲಿ ಮಾತಿನ ಚಕಮಕಿಯ ನಂತರ ಬಾಲಕ ಹಾಗೂ ಆತನ ಸ್ನೇಹಿತರು ಮನೆಗೆ ಹೊರಟಿದ್ದಾರೆ.
ಆದರೆ, ಸುಮಾರು 15 ರಿಂದ 20 ನಿಮಿಷಗಳ ನಂತರ ಅದೇ ಮೂವರು ಬಾಲಕರು ಮತ್ತೆ ಬಂದು ಬಾಲಕನೊಂದಿಗೆ ತೀವ್ರ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಆರೋಪಿಗಳಲ್ಲೊಬ್ಬ ಚಾಕುವಿನಿಂದ ಬಾಲಕನ ಬಲ ತೊಡೆಗೆ ಆಳವಾಗಿ ಇರಿದು, ತನ್ನಿಬ್ಬರು ಸಹಚರರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಧ್ಯಾಹ್ನ ಸುಮಾರು 1:50 ರ ವೇಳೆಗೆ ಸೋನಿಯಾ ಆಸ್ಪತ್ರೆಯಿಂದ ಕರೆ ಬಂದ ತಕ್ಷಣವೇ ನಾಂಗ್ಲೋಯಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸಿದಾಗ ಬಾಲಕನ ತೊಡೆಯ ಮೇಲೆ 3×1.5 ಇಂಚಿನಷ್ಟು ದೊಡ್ಡ ಗಾಯವಾಗಿರುವುದು ಕಂಡುಬಂದಿದೆ. ತೀವ್ರ ರಕ್ತಸ್ರಾವದಿಂದಾಗಿ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮೂವರೂ ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಶವಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.





Leave a comment