ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ತಮ್ಮ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ಜೈಲು ಸೇರುವವರೆಗೂ ತಾವು ವಿಶ್ರಮಿಸುವುದಿಲ್ಲ ಎಂದು ಪ್ರತಿಭಟನಾಕಾರ ಹಾಗೂ ವಿದ್ಯಾರ್ಥಿನಿ ನಿಶು ಆಜಾದ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪಾಡ್‌ಕಾಸ್ಟ್ ವೀಡಿಯೊದಲ್ಲಿ, ಸ್ವತಂತ್ರ ಭಾರದ್ವಾಜ್ ತಾವು ನಿಶು ಅವರ ತಂದೆಯ ತಲೆಗೆ ಹೊಡೆದು ತೀವ್ರ ಗಾಯಗೊಳಿಸಿದ್ದಾಗಿ ಮತ್ತು ತಮ್ಮ ರಾಜಕೀಯ ಪ್ರಭಾವದಿಂದಾಗಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ವೀಡಿಯೊ ತೀವ್ರ ಸೌಂಡು ಮಾಡುತ್ತಿದ್ದಂತೆ, ಸ್ವತಂತ್ರ ಭಾರದ್ವಾಜ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದು, “ಅದು ಆತ್ಮರಕ್ಷಣೆಗಾಗಿ (Self-defence) ಮಾಡಿದ ಕೆಲಸ. ನನ್ನ ಮೇಲೆ 10-15 ಜನರ ಗುಂಪು ದಾಳಿ ಮಾಡಲು ಬಂದಾಗ ತಪ್ಪಿಸಿಕೊಳ್ಳಲು ಹೀಗೆ ಮಾಡಬೇಕಾಯಿತು” ಎಂದು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ ಮತ್ತು ಕಾನೂನು ಕ್ರಮ:
CJP ಕಾರ್ಯಕರ್ತರು, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ತೀವ್ರ ಒತ್ತಡದ ನಂತರ, ದೆಹಲಿ ಪೊಲೀಸರು ಸ್ವತಂತ್ರ ಭಾರದ್ವಾಜ್ ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈ ಕೆಳಗಿನ ಪ್ರಮುಖ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ:
SC/ST ದೌರ್ಜನ್ಯ ತಡೆ ಕಾಯ್ದೆ: ಸಂತ್ರಸ್ತರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಹಳೆಯ ಎಫ್‌ಐಆರ್‌ಗೆ SC/ST ಕಾಯ್ದೆಯಡಿ ಪ್ರಕರಣ ಸೇರಿಸಲಾಗಿದೆ.
POCSO ಕಾಯ್ದೆ: ಮೈನರ್ ಆಗಿರುವ ನಿಶು ಆಜಾದ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಬೆದರಿಕೆ ಹಾಗೂ ಕಿರುಕುಳ ನೀಡಲಾದ ದೂರಿನ ಮೇರೆಗೆ ಪ್ರತ್ಯೇಕ ಪೋಕ್ಸೋ (POCSO) ಪ್ರಕರಣ ದಾಖಲಿಸಲಾಗಿದೆ.
ಕೊಲೆ ಬೆದರಿಕೆ ಕಾಯ್ದೆ: ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351(3) ಅಡಿಯಲ್ಲಿ ಜೀವ ಬೆದರಿಕೆ ಹಾಕಿದ ಆರೋಪ ಹೊರಿಸಲಾಗಿದೆ.
ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ನಿಶು ಆಜಾದ್ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ.





Leave a comment