ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಾರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿದ್ದ, ಶತಮಾನಕ್ಕೂ ಹಳೆಯ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆಯನ್ನು ಭಾರತ ಸರ್ಕಾರ ಅತ್ಯಂತ ತೀವ್ರವಾಗಿ ಖಂಡಿಸಿದೆ. ಆಗಸ್ಟ್ 21 ರಂದು ನಡೆದ ಈ ಘಟನೆಯ ವರದಿಗಳನ್ನು ಉಲ್ಲೇಖಿಸಿ ಬುಧವಾರ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಇದನ್ನು “ಖಂಡನೀಯ ವಂದಿಸಂ ಕ್ರಿಯೆ” ಎಂದು ಬಣ್ಣಿಸಿದೆ.
ಭಾರತದ ತೀವ್ರ ಆಕ್ಷೇಪ ಮತ್ತು ಆಗ್ರಹ:
ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಮಾತನಾಡಿ, “ಐತಿಹಾಸಿಕ ಅಲ್ಪಸಂಖ್ಯಾತ ಪ್ರಾರ್ಥನಾ ಮಂದಿರದ ಧ್ವಂಸದ ವರದಿಗಳು ತೀವ್ರ ಕಳವಳ ತಂದಿದ್ದು, ಇದನ್ನು ನಾವು ಏಕಕಂಠದಿಂದ ಖಂಡಿಸುತ್ತೇವೆ. ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಲ್ಲಿ ಪಾಕಿಸ್ತಾನ ಆಡಳಿತಸಂಸ್ಥೆಗಳು ತೋರುತ್ತಿರುವ ನಿರ್ಲಕ್ಷ್ಯ ಹಾಗೂ ವೈಫಲ್ಯ ಆತಂಕಕಾರಿಯಾಗಿದೆ” ಎಂದು ಹೇಳಿದ್ದಾರೆ.
ಇದರ ಜೊತೆಗೆ, ಈ ಕುರಿತು ತಕ್ಷಣವೇ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಧ್ವಂಸಗೊಂಡ ದೇವಾಲಯವನ್ನು ಮೂಲ ರೂಪದಲ್ಲೇ ತಕ್ಷಣವೇ ಪುನರ್ನಿರ್ಮಿಸಿಕೊಡಬೇಕು ಎಂದು ಭಾರತ ಆಗ್ರಹಿಸಿದೆ.
ಮದರಸಾಗಾಗಿ ಒತ್ತುವರಿ ಆರೋಪ:
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಸ್ಥಳೀಯ ಅಲ್ಪಸಂಖ್ಯಾತರ ಪ್ರತಿನಿಧಿಗಳು ಹಾಗೂ ಪಾಕಿಸ್ತಾನ್ ಮಸಿಹಾ ಮಿಲ್ಲತ್ ಪಾರ್ಟಿ ಅಧ್ಯಕ್ಷ ಅಸ್ಲಂ ಪರ್ವೇಜ್ ಸಹೋತ್ರಾ ಅವರು, ನಿಷೇಧಿತ ಉಗ್ರಗಾಮಿ ಸಂಘಟನೆ ‘ತೆಹ್ರೀಕ್-ಇ-ಲಬೈಕ್ ಪಾಕಿಸ್ತಾನ್’ ನ ಕೋಮುವಾದಿಗಳು ಈ ದೇವಾಲಯವನ್ನು ಉದ್ದೇಶಪೂರ್ವಕವಾಗಿ ನೆಲಸಮಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೇವಾಲಯದ ಶಿಖರದ ಲೋಹದ ವಸ್ತುಗಳು, ಇಟ್ಟಿಗೆಗಳನ್ನು ಕದ್ದೊಯ್ಯಲಾಗಿದ್ದು, ಅಕ್ಕಪಕ್ಕದ ಮದರಸಾ ವಿಸ್ತರಣೆಗಾಗಿ ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆಗಸ್ಟ್ 28 ರಂದು ಪಂಜಾಬ್ ಗೃಹ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಮಳೆಯಿಂದ ಕುಸಿತವೆಂದ ಪಾಕ್ ಅಧಿಕಾರಿಗಳು:
ಆದರೆ, ಈ ಆರೋಪಗಳನ್ನು ಪಾಕಿಸ್ತಾನದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಸಂಪೂರ್ಣವಾಗಿ ನಿರಾಕರಿಸಿದೆ. ETPB ಹಿರಿಯ ಅಧಿಕಾರಿ ರಾಣಾ ಇಫ್ತಿಕಾರ್ ಪ್ರಕಾರ, “ಈ ದೇವಾಲಯವು 100 ರಿಂದ 125 ವರ್ಷ ಹಳೆಯದಾಗಿದ್ದು, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕುಸಿದುಬಿದ್ದಿದೆ. ದೇವಾಲಯದ ಭೂಮಿಯನ್ನು ಯಾರಿಗೂ ಲೀಸ್‌ಗೆ ನೀಡಿಲ್ಲ” ಎಂದು ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ಸಭೆಯ ಬಳಿಕ ದೇವಾಲಯದ ಪುನರ್ನಿರ್ಮಾಣದ ಕುರಿತು ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.





Leave a comment