ಶಿವಮೊಗ್ಗ: ಹುಟ್ಟು ಮೂಕ ತಂದೆಗೆ ಸಿಗಬೇಕಿದ್ದ ಅಂಗವಿಕಲರ ಪಿಂಚಣಿ ಸೌಲಭ್ಯ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ಅಧಿಕಾರಿಗೆ ಶಿವಮೊಗ್ಗದ ನ್ಯಾಯಾಲಯವು 4 ವರ್ಷಗಳ ಸಜಾ ಹಾಗೂ ₹40,000 ದಂಡ ವಿಧಿಸಿ ತೀರ್ಪು ನೀಡಿದೆ.
ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಾಡಕಚೇರಿಯ ಉಪ ತಹಶೀಲ್ದಾರ್ ಆಗಿದ್ದ ಶ್ರೀಮತಿ ಪುಷ್ಪಲತಾ ಶಿಕ್ಷೆಗೆ ಒಳಗಾದ ಅಧಿಕಾರಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ:
ಭದ್ರಾವತಿ ತಾಲೂಕಿನ ಡಿ.ಬಿ. ಹಳ್ಳಿಯ ನಿವಾಸಿ ಗಿರೀಶ್ ಎಂಬುವರು ತಮ್ಮ ಹುಟ್ಟು ಮೂಕ ತಂದೆಗೆ ಅಂಗವಿಕಲರ ಪಿಂಚಣಿ ಕೊಡಿಸಲು ಕಲ್ಲಿಹಾಳ್ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಉಪ ತಹಶೀಲ್ದಾರ್ ಪುಷ್ಪಲತಾ ಅವರು ₹10,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಲಂಚ ನೀಡಲು ಇಷ್ಟವಿಲ್ಲದ ಗಿರೀಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ 2017ರ ಸೆಪ್ಟೆಂಬರ್ 21ರಂದು ಭದ್ರಾವತಿ ತಾಲೂಕು ಕಚೇರಿಯಲ್ಲಿ ಗಿರೀಶ್ ಅವರಿಂದ ಮುಂಗಡವಾಗಿ ₹5,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಪುಷ್ಪಲತಾ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು.
ಸುದೀರ್ಘ ವಿಚಾರಣೆ ಮತ್ತು ಶಿಕ್ಷೆ:
ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್‌ಸ್ಪೆಕ್ಟರ್ ಹೆಚ್.ಎಸ್. ತಿಪ್ಪೇಸ್ವಾಮಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ (SPP) ಸುಂದರ್ ರಾಜ್ ಅವರು ವಾದ ಮಂಡಿಸಿದ್ದರು.





Leave a comment