Home ದಾವಣಗೆರೆ ದಾವಣಗೆರೆಯಲ್ಲಿ ಸ್ಟಾರ್ಟ್‌ಅಪ್‌ ಅಭಿವೃದ್ಧಿ ಆದ್ಯತೆಗೆ ಜಿಎಂಯು ಪ್ರೊ ವೈಸ್ ಚಾನ್ಸಲರ್ ಡಾ. ವೇಣುಗೋಪಾಲ್ ರಾವ್ ಕರೆ
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯಲ್ಲಿ ಸ್ಟಾರ್ಟ್‌ಅಪ್‌ ಅಭಿವೃದ್ಧಿ ಆದ್ಯತೆಗೆ ಜಿಎಂಯು ಪ್ರೊ ವೈಸ್ ಚಾನ್ಸಲರ್ ಡಾ. ವೇಣುಗೋಪಾಲ್ ರಾವ್ ಕರೆ

Share
ದಾವಣಗೆರೆ
Share

ದಾವಣಗೆರೆ: ಕರ್ನಾಟಕದ ನವೋದ್ಯಮ (ಸ್ಟಾರ್ಟ್‌ಅಪ್) ಭೂಪಟದಲ್ಲಿ ಬೆಂಗಳೂರು ಪ್ರಮುಖ ಸ್ಥಾನ ಪಡೆದಿದೆ. ಆದರೆ ಇದರ ಜೊತೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ತುಮಕೂರಿನಂತಹ ನಗರಗಳಲ್ಲೂ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಬೆಳೆಯುತ್ತಿದ್ದು, ದಾವಣಗೆರೆ ನಗರದಲ್ಲೂ ಈ ನಿಟ್ಟಿನಲ್ಲಿ ಹೆಚ್ಚಿನ ಅವಕಾಶಗಳನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಪ್ರೊ ವೈಸ್ ಚಾನ್ಸಲರ್ ಡಾ. ವೇಣುಗೋಪಾಲ್ ರಾವ್ ಅಭಿಪ್ರಾಯಪಟ್ಟರು.

ನಗರದ ಜಿ.ಎಂ. ವಿಶ್ವವಿದ್ಯಾಲಯದ ಸೆಂಟ್ರಲ್ ಲೈಬ್ರರಿ ಹಾಲ್‌ನಲ್ಲಿ ಸೆಪ್ಟೆಂಬರ್ 1,2026 ರಂದು ಕರ್ನಾಟಕ ಸರ್ಕಾರದ ಇಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM), ಸ್ಟಾರ್ಟ್‌ಅಪ್ ಕರ್ನಾಟಕ ಹಾಗೂ ‘ವಿಷನ್ ದಾವಣಗೆರೆ’ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆ’ (Startup & Innovation) ಎಂಬ ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ವೇಣುಗೋಪಾಲ್ ರಾವ್ ಅವರು, ದಾವಣಗೆರೆಯು ಭೌಗೋಳಿಕವಾಗಿ ಬೆಂಗಳುರು ಮತ್ತು ಹುಬ್ಬಳ್ಳಿ ನಡುವಿನ ಪ್ರಮುಖ ಕೇಂದ್ರ ಬಿಂದುವಾಗಿದ್ದು, ಉದ್ಯಮಶೀಲತೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ರಾಜ್ಯ ಸರ್ಕಾರವು ‘ಕೆಡಿಇಎಂ’ (KDEM) ಮೂಲಕ ಕೈಗೊಂಡಿರುವ ‘ವಿಷನ್ ದಾವಣಗೆರೆ’ ಯೋಜನೆಯಡಿ ಸ್ಥಳೀಯ ಯುವ ಉದ್ಯಮಿಗಳಿಗೆ ವ್ಯಾಪಕ ಅವಕಾಶಗಳು ದೊರೆಯಲಿವೆ ಎಂದು ಉಲ್ಲೇಖಿಸಿದರು.

ಯುವಕರು ಕೇವಲ ಉದ್ಯೋಗ ಹುಡುಕುವವರಾಗದೆ (Job Seekers), ಉದ್ಯೋಗ ನೀಡುವ ಉದ್ಯಮಿಗಳಾಗಲು (Entrepreneurs) ಮುಂದಾಗಬೇಕು. ಯಾವುದೇ ಒಂದು ಹೊಸ ಕಲ್ಪನೆಯು (Idea) ವಾಣಿಜ್ಯ ರೂಪದಲ್ಲಿ ಯಶಸ್ವಿಯಾಗಲು ಸರಿಯಾದ ಮಾರ್ಗದರ್ಶನ ಹಾಗೂ ಸೌಲಭ್ಯ ಯೋಜನೆಗಳ ಅಗತ್ಯವಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಂಸ್ಥೆಯ ‘ಸ್ಟಾರ್ಟ್‌ಅಪ್ ಅಂಡ್ ಇನ್ನೋವೇಶನ್’ ಸಹ-ಉಪಾಧ್ಯಕ್ಷರಾದ ಭರತ್ ಚಂದ್ರ ಬಿ.ಕೆ ಮಾತನಾಡಿ, ಕರ್ನಾಟಕ ಸರ್ಕಾರವು ಉದ್ಯಮಿಗಳಿಗೆ ಹಾಗೂ ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. 2015 ರಲ್ಲಿ ಕರ್ನಾಟಕ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ಅಧಿಕೃತ ‘ಸ್ಟಾರ್ಟ್‌ಅಪ್ ನೀತಿ’ಯನ್ನು ಜಾರಿಗೆ ತಂದಿತು. ಶಿಕ್ಷಣ ಹಂತದಿಂದ ಹಿಡಿದು ಜಾಗತಿಕ ಮಟ್ಟದಲ್ಲಿ ಬೆಳೆಯುವವರೆಗಿನ ಎಲ್ಲಾ ಹಂತಗಳಲ್ಲಿ ಉದ್ಯಮಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದರು.

ಭಾರತದಾದ್ಯಂತ ‘DPIIT’ ನಿಂದ ಮಾನ್ಯತೆ ಪಡೆದ ಒಟ್ಟು 2.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ. ಇದರಲ್ಲಿ ಕರ್ನಾಟಕ ಒಂದರಲ್ಲೇ 23,000ಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಇದುವರೆಗೆ 3,300ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರದಿಂದ ಹಾಗೂ ವಿವಿಧ ಮೂಲಗಳಿಂದ ಬಂಡವಾಳ ಧನಸಹಾಯ (Funding) ದೊರೆತಿದೆ. ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕವು ಅತ್ಯುತ್ತಮ 14ನೇ ಶ್ರೇಯಾಂಕ ಗಳಿಸಿದೆ. ಭಾರತದಲ್ಲಿರುವ ಒಟ್ಟು 130+ ಯೂನಿಕಾರ್ನ್‌ಗಳಲ್ಲಿ (1 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಗಳು) ಸುಮಾರು 56 ಯೂನಿಕಾರ್ನ್‌ಗಳು ಕರ್ನಾಟಕದಿಂದಲೇ ಹೊರಹೊಮ್ಮಿವೆ ಎಂದು ವಿವರಿಸಿದರು.

ರಾಜ್ಯದಲ್ಲಿ 2,200ಕ್ಕೂ ಹೆಚ್ಚು ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳಿದ್ದು, 650ಕ್ಕೂ ಹೆಚ್ಚು ಕಂಪನಿಗಳು ಧನಸಹಾಯ ಪಡೆದಿವೆ. ಪ್ರಸ್ತುತ ಶೇ. 70ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು (ಸುಮಾರು 17,000) ಬೆಂಗಳೂರಿನಲ್ಲೇ ಕೇಂದ್ರಿಕೃತವಾಗಿದ್ದು, ಇನ್ನುಳಿದ 5,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಇತರ ಜಿಲ್ಲೆಗಳಿಂದ ಬಂದಿವೆ. ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ (KDEM) ಮೂಲಕ ಬೆಂಗಳೂರಿನಿಂದ ಹೊರಗಿನ ನಗರಗಳಲ್ಲೂ ಈ ತಾಂತ್ರಿಕ ನಾವೀನ್ಯತೆಯನ್ನು ಬೆಳೆಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ KDEM ನ ‘KAN’ ಯೋಜನಾ ವ್ಯವಸ್ಥಾಪಕರಾದ ಸುವಿನ್ ನಾರಾಯಣ್, ‘ವಿಷನ್ ದಾವಣಗೆರೆ’ಯ ದೀಪಕ್ ಅವರು ಉಪನ್ಯಾಸ ನೀಡಿ, ಕರ್ನಾಟಕ ಸ್ಟಾರ್ಟ್‌ಅಪ್ ನೀತಿಯ ಅಡಿಯಲ್ಲಿ ಲಭ್ಯವಿರುವ ಬೆಂಬಲ, ನೂತನ ಸೌಲಭ್ಯಗಳು ಹಾಗೂ ಬೆಳೆಯುತ್ತಿರುವ ಉದ್ಯಮ ರಂಗದ ಅವಕಾಶಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಹಲವಾರು ಹೊಸ ಸ್ಟಾರ್ಟ್‌ಅಪ್ ಸಂಸ್ಥಾಪಕರು, ಇನ್‌ಕ್ಯುಬೇಟರ್‌ಗಳು, ವಿದ್ಯಾರ್ಥಿ ಉದ್ಯಮಿಗಳು ಹಾಗೂ ಉದ್ಯಮ ಕ್ಷೇತ್ರದ ಆಸಕ್ತರು, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಈ ಜ್ಞಾನಾರ್ಜನೆಯ ಅವಕಾಶದ ಸೌಲಭ್ಯವನ್ನು ಪಡೆದುಕೊಂಡರು.

Share

Leave a comment

Leave a Reply

Your email address will not be published. Required fields are marked *

Related Articles