Home ಕ್ರೈಂ ನ್ಯೂಸ್ ಸಚಿವರ ಮನೆ ಎದುರಿನ ಪಾರ್ಕ್‌ಗೆ ₹90 ಲಕ್ಷ ವೆಚ್ಚ, ದಾವಣಗೆರೆ ನಗರದ ಇತರೆ ಪಾರ್ಕ್‌ಗಳ ದುಸ್ಥಿತಿ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ?: ಅಫ್ಸರ್ ಕೊಡ್ಲಿಪೇಟೆ ಪ್ರಶ್ನೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಚಿವರ ಮನೆ ಎದುರಿನ ಪಾರ್ಕ್‌ಗೆ ₹90 ಲಕ್ಷ ವೆಚ್ಚ, ದಾವಣಗೆರೆ ನಗರದ ಇತರೆ ಪಾರ್ಕ್‌ಗಳ ದುಸ್ಥಿತಿ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ?: ಅಫ್ಸರ್ ಕೊಡ್ಲಿಪೇಟೆ ಪ್ರಶ್ನೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ನಗರದ ಗುಂಡಿ ಸರ್ಕಲ್ ಸಮೀಪ ಸಚಿವರ ನಿವಾಸದ ಎದುರು ತೋಟಗಾರಿಕೆ ಇಲಾಖೆಯ ವತಿಯಿಂದ ಸುಮಾರು ₹90 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಪಾರ್ಕ್ ಕಾಮಗಾರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿಯ ಅಗತ್ಯತೆ ಹಾಗೂ ಇಷ್ಟು ದೊಡ್ಡ ಮೊತ್ತದ ವೆಚ್ಚದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿದ್ದು, ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ ನಗರದ ಹಲವಾರು ಪ್ರದೇಶಗಳಲ್ಲಿರುವ ಪಾರ್ಕ್‌ಗಳು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಅನೇಕ ಪಾರ್ಕ್‌ಗಳಿಗೆ ಸುತ್ತಲೂ ತಡೆಗೋಡೆ ಅಥವಾ ಕಾಂಪೌಂಡ್ ಇಲ್ಲದೆ ಬೀಡಾಡಿ ದನಗಳ ಓಡಾಟಕ್ಕೆ ಅವಕಾಶವಾಗಿದ್ದು, ಕೆಲವು ಪ್ರದೇಶಗಳು ಅಸಾಮಾಜಿಕ ಚಟುವಟಿಕೆಗಳಿಗೆ ಮತ್ತು ಪಡ್ಡೆ ಯುವಕರ ಅಡ್ಡೆಗಳಾಗಿ ಮಾರ್ಪಟ್ಟಿವೆ. ಮಕ್ಕಳ ಆಟದ ಮೈದಾನಗಳು, ವಾಕಿಂಗ್ ಟ್ರ್ಯಾಕ್‌ಗಳು ಹಾಗೂ ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯುವ ಸ್ಥಳಗಳು ಸೂಕ್ತ ನಿರ್ವಹಣೆಯಿಲ್ಲದೆ ಹದಗೆಟ್ಟಿವೆ.

ನಗರದ ಇಂತಹ ಪಾರ್ಕ್‌ಗಳಿಗೆ ಮೊದಲು ಕಾಂಪೌಂಡ್ ನಿರ್ಮಿಸಿ, ಸ್ವಚ್ಛತೆ, ವಿದ್ಯುತ್ ದೀಪ, ಭದ್ರತೆ, ಹಸಿರೀಕರಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬದಲು, ಸಚಿವರ ನಿವಾಸದ ಎದುರಿನ ಪಾರ್ಕ್‌ಗೆ ಮಾತ್ರ ಸುಮಾರು ₹90 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

“ದಾವಣಗೆರೆ ನಗರದ ಬಡಾವಣೆಗಳಲ್ಲಿರುವ ಪಾರ್ಕ್‌ಗಳಿಗೆ ಕಾಂಪೌಂಡ್ ಹಾಕಲು ಹಣವಿಲ್ಲವೇ? ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಪಾರ್ಕ್‌ಗಳು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಬೀಡಾಡಿ ದನಗಳು ಹಾಗೂ ಅಸಾಮಾಜಿಕ ಚಟುವಟಿಕೆಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದು ಕಾಣುತ್ತಿಲ್ಲವೇ? ಹಾಗಾದರೆ ಸಚಿವರ ಮನೆ ಎದುರಿನ ಪಾರ್ಕ್‌ಗೆ ಮಾತ್ರ ಇಷ್ಟು ದೊಡ್ಡ ಮೊತ್ತದ ಕಾಮಗಾರಿ ಏಕೆ?” ಎಂದು ಅಫ್ಸರ್ ಕೊಡ್ಲಿಪೇಟೆ ಪ್ರಶ್ನಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣವನ್ನು ಜನರ ಅಗತ್ಯತೆ ಮತ್ತು ಆದ್ಯತೆಯ ಆಧಾರದ ಮೇಲೆ ಬಳಸಬೇಕೇ ಹೊರತು, ಯಾವುದೇ ವ್ಯಕ್ತಿ ಅಥವಾ ಪ್ರಭಾವಿ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಾರದು. ಈ ಹಿನ್ನೆಲೆಯಲ್ಲಿ ₹90 ಲಕ್ಷದ ಕಾಮಗಾರಿಗೆ ಸಂಬಂಧಿಸಿದ ಅಂದಾಜು, ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ, ಟೆಂಡರ್ ಪ್ರಕ್ರಿಯೆ, ಗುತ್ತಿಗೆದಾರರ ವಿವರ ಹಾಗೂ ಕಾಮಗಾರಿಯ ನೈಜ ಅವಶ್ಯಕತೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು.

ಈ ಕಾಮಗಾರಿಯಲ್ಲಿ ಯಾವುದೇ ನಿಯಮ ಉಲ್ಲಂಘನೆ, ಅನಗತ್ಯ ವೆಚ್ಚ ಅಥವಾ ಸಾರ್ವಜನಿಕ ಹಣದ ದುರುಪಯೋಗ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ದಾವಣಗೆರೆ ನಗರದ ಎಲ್ಲಾ ಪಾರ್ಕ್‌ಗಳ ಸ್ಥಿತಿಗತಿಗಳ ಕುರಿತು ಸಮಗ್ರ ಸಮೀಕ್ಷೆ ನಡೆಸಿ, ಕಾಂಪೌಂಡ್, ಸ್ವಚ್ಛತೆ, ಹಸಿರುಕರಣ, ಬೆಳಕು, ಭದ್ರತೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಸಚಿವರ ಮನೆ ಎದುರಿನ ಪಾರ್ಕ್ ಮಾತ್ರವಲ್ಲ, ದಾವಣಗೆರೆಯ ಪ್ರತಿಯೊಂದು ಪಾರ್ಕ್‌ವೂ ಸಾರ್ವಜನಿಕರ ಆಸ್ತಿಯಾಗಿದೆ. ಸಚಿವರ ಮನೆ ಎದುರು ಇರುವುದರಿಂದ ಒಂದು ಪಾರ್ಕ್‌ಗೆ ವಿಶೇಷ ಆದ್ಯತೆ, ಉಳಿದ ಪಾರ್ಕ್‌ಗಳಿಗೆ ನಿರ್ಲಕ್ಷ್ಯ ಎಂಬ ಭಾವನೆ ಜನರಲ್ಲಿ ಮೂಡಬಾರದು. ಸರ್ಕಾರ ಕೂಡಲೇ ಈ ಕಾಮಗಾರಿಯನ್ನು ಪರಿಶೀಲಿಸಿ, ಸಾರ್ವಜನಿಕರ ಹಣದ ಪ್ರತಿಯೊಂದು ರೂಪಾಯಿಯೂ ಜನರ ಹಿತಕ್ಕಾಗಿ ಬಳಕೆಯಾಗುವಂತೆ ಖಚಿತಪಡಿಸಬೇಕು” ಎಂದು ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles