ದಾವಣಗೆರೆ: ನಗರದ ಪ್ರತಿಷ್ಠಿತ ಪುಷ್ಪ ಮಹಾಲಿಂಗಪ್ಪ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ಜೀವನ್ (16) ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಪಂಚನಹಳ್ಳಿ ಬಳಿ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ನು ಮೊಬೈಲ್‌ನಲ್ಲಿ ಗಮನಿಸಿದ ಸಹ ಪ್ರಯಾಣಿಕರೊಬ್ಬರು, ಬಸ್‌ನಲ್ಲಿದ್ದ ಬಾಲಕನನ್ನು ಗುರುತಿಸಿ ಕೂಡಲೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಾನು ಶಾಲೆ ಬಿಟ್ಟು ಹೋಗಲು ಹಾಗೂ ವಾರ್ಡನ್ ಕಿರುಕುಳದ ಬಗ್ಗೆ ವಿದ್ಯಾರ್ಥಿ ವೀಡಿಯೋ ಮೂಲಕ ವಿವರಣೆ ನೀಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದೇ ಮಗ ನಾಪತ್ತೆಯಾಗಲು ಕಾರಣ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಘಟನೆ ಹಿನ್ನೆಲೆ ಏನು?
ದಾವಣಗೆರೆ ನಗರದ ಪುಷ್ಪಾ ಮಹಾಲಿಂಗಪ್ಪ ವಸತಿ ಶಾಲೆಯಲ್ಲಿ ಓದುತ್ತಿದ್ದ 16 ವರ್ಷದ ಜೀವನ ಎಂಬ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ವರದಿಯಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಡಿ.ಹೊಸಳ್ಳಿ ಗ್ರಾಮದ ನಿವಾಸಿಯಾಗಿರುವ ಈ ವಿದ್ಯಾರ್ಥಿ ಕಳೆದ ಮೂರು ವರ್ಷಗಳಿಂದ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಶಾಲೆಯ ವಾರ್ಡನ್ ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದು, ಈ ಹಿಂಸೆಗೆ ಬೇಸತ್ತು ನಿನ್ನೆ ರಾತ್ರಿ 8:30ರ ಸುಮಾರಿಗೆ ಪುತ್ರ ನಾಪತ್ತೆಯಾಗಿದ್ದಾನೆ ಎಂದು ಪಾಲಕರು ಗಂಭೀರ ಆರೋಪ ಮಾಡಿದ್ದರು.
ಸಾವಿರಾರು ರೂಪಾಯಿ ಶುಲ್ಕ ಕಟ್ಟಿ ಮಕ್ಕಳನ್ನು ಕಳುಹಿಸಿದರೆ ಶಾಲಾ ಆಡಳಿತ ಮಂಡಳಿಯು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಹಾಗೂ ‘ಕಾಂಪೌಂಡ್ ಹಾರಿ ಹೋಗಿದ್ದಾನೆ’ ಎಂದು ತಪ್ಪು ಮಾಹಿತಿ ನೀಡುತ್ತಿದೆ ಎಂದು ಪಾಲಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.





Leave a comment