ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನರಕಯಾತನೆ ತರುತ್ತಿರುವ ಟ್ರಾಫಿಕ್ ದಟ್ಟಣೆಯು ಐಟಿ-ಬಿಪಿಒ ನೌಕರರ ಕೆಲಸದ ಮೇಲೆಯೂ ಭಾರಿ ಪರಿಣಾಮ ಬೀರಲು ಪ್ರಾರಂಭಿಸಿದೆ.
ಬೆಳಿಗ್ಗೆ 10:15 ಕಳೆದರೂ ತಮ್ಮ ಕಚೇರಿಯ ಅರ್ಧದಷ್ಟು ಆಸನಗಳು ಖಾಲಿ ಬಿದ್ದಿರುವುದನ್ನು ಕಂಡ ‘ಅಪ್ಲೈಡ್ ಎಐ ಸ್ಟುಡಿಯೋ’ (Applied AI Studio) ಸಂಸ್ಥಾಪಕ ಬಾಲ ಪನ್ನೀರ್ಸೆಲ್ವಂ ಅವರು ಸಾಮಾಜಿಕ ಜಾಲತಾಣ ಲಿಂಕ್ಡ್ಇನ್ನಲ್ಲಿ ಕಚೇರಿಯ ಫೋಟೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
“ಇಲ್ಲಿ ಸಮಸ್ಯೆಯಿರುವುದು ಉದ್ಯೋಗಿಗಳ ಸೋಮಾರಿತನದಲ್ಲಿ ಅಲ್ಲ, ಬದಲಾಗಿ ದಿನನಿತ್ಯ ಕಚೇರಿಗೆ ತಲುಪಲು ಅವರು ಪಡುತ್ತಿರುವ ದೈಹಿಕ ಮತ್ತು ಮಾನಸಿಕ ಶ್ರಮದಲ್ಲಿ” ಎಂದು ಬಾಲ ಪನ್ನೀರ್ಸೆಲ್ವಂ ಬರೆದುಕೊಂಡಿದ್ದಾರೆ. ಹೆಚ್ಎಸ್ಆರ್ ಲೇಔಟ್ನಲ್ಲಿ ಕೇವಲ 4 ಕಿಲೋಮೀಟರ್ ಸಂಚರಿಸಲು ಸ್ಕೂಟರ್ನಲ್ಲಿ 20 ನಿಮಿಷ ಹಾಗೂ ಕಾರಿನಲ್ಲಿ 30 ನಿಮಿಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ. ಯಾವುದೇ ಮಳೆಯಿಲ್ಲದಿದ್ದರೂ ವೈಟ್ಫೀಲ್ಡ್ನಿಂದ ಹೆಚ್ಎಸ್ಆರ್ಗೆ 17 ಕಿಮೀ ತಲುಪಲು ನನಗೆ ಬರೋಬ್ಬರಿ 2 ಗಂಟೆ ಬೇಕಾಯಿತು.
ರಸ್ತೆಯಲ್ಲಾಗುವ ಕಿರಿಕಿರಿ, ಸಿಗ್ನಲ್ ಜಂಪ್ ಮಾಡುವ ವಾಹನಗಳನ್ನು ತಪ್ಪಿಸಿಕೊಂಡು ಕಚೇರಿಗೆ ತಲುಪುವಷ್ಟರಲ್ಲಿ ನೌಕರರ ಶಕ್ತಿ ಹಾಗೂ ಉತ್ಸಾಹ ಸಂಪೂರ್ಣ ಕುಸಿದಿರುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಜೆ 6 ಗಂಟೆಯ ನಂತರ ಮನೆಗೆ ಮರಳುವಾಗಲೂ ಇದೇ ಭೀಕರ ಪರಿಸ್ಥಿತಿ ಎದುರಾಗಲಿದ್ದು, ಇದರಿಂದಾಗಿ ಉದ್ಯೋಗಿಗಳಿಗೆ ಸೂಕ್ತ ವಿಶ್ರಾಂತಿ ಸಿಗದೆ ಮರುದಿನವೂ ಕಚೇರಿಗೆ ತಡವಾಗಿ ಬರುವಂತಾಗಿದೆ. ಈ ಪೋಸ್ಟ್ಗೆ ಬೆಂಗಳೂರಿನ ಸಾವಿರಾರು ಐಟಿ ಉದ್ಯೋಗಿಗಳು ಹಾಗೂ ನೆಟ್ಟಿಗರು ತೀವ್ರ ಬೆಂಬಲ ವ್ಯಕ್ತಪಡಿಸಿದ್ದು, ನಗರದ ಮೂಲಸೌಕರ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.





Leave a comment