ನವದೆಹಲಿ: ಕ್ರೀಡಾಂಗಣದಲ್ಲಿ ಕೇವಲ ಜಿದ್ದಾಜಿದ್ದಿನ ಪಂದ್ಯಗಳು ಮಾತ್ರವಲ್ಲದೆ, ಕ್ರೀಡಾಪಟುಗಳ ನಡುವೆ ನಡೆಯುವ ಆಸಕ್ತಿಕರ ಪ್ರಸಂಗಗಳು ದಶಕಗಳ ಕಾಲ ನೆನಪಿನಲ್ಲಿ ಉಳಿಯುತ್ತವೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಬಂದ ಭಾರತದ ಪ್ರಸಿದ್ಧ ಬಾಕ್ಸರ್ ನರೇಂದರ್ ಬರ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ವೇಳೆ ಇಂತಹದೇ ಒಂದು ತಮಾಷೆಯ ಘಟನೆಯನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕಾಮನ್ವೆಲ್ತ್ ಪದಕ ವಿಜೇತರ ಸನ್ಮಾನ ಸಮಾರಂಭ ನಡೆಯಿತು. ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಿದ ಬಾಕ್ಸರ್ ನರೇಂದರ್ ಬರ್ವಾಲ್, 2015ರ ಮಿಲಿಟರಿ ವರ್ಲ್ಡ್ ಗೇಮ್ಸ್ನಲ್ಲಿ ನಡೆದ ರಸವತ್ತಾದ ಪ್ರಸಂಗವನ್ನು ನೆನಪಿಸಿಕೊಂಡರು.
ಪಾಕಿಸ್ತಾನಿ ಬಾಕ್ಸರ್ ಜೊತೆಗಿನ ಕಾಳಗ:
“2015ರ ಮಿಲಿಟರಿ ವರ್ಲ್ಡ್ ಗೇಮ್ಸ್ನಲ್ಲಿ ನನ್ನ ಮೊದಲ ಪಂದ್ಯವೇ ಪಾಕಿಸ್ತಾನದ ಬಾಕ್ಸರ್ ವಿರುದ್ಧ ಇತ್ತು. ನಾವು ಮಿಲಿಟರಿ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ‘ಯಾವುದೇ ಕಾರಣಕ್ಕೂ ಪಾಕಿಸ್ತಾನದ ವಿರುದ್ಧ ಸೋಲಬಾರದು’ ಎಂದು ಹಿರಿಯ ಅಧಿಕಾರಿಗಳಿಂದ ಕರೆಗಳು ಬಂದಿದ್ದವು. ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿ ನಾನು ಜಯಗಳಿಸಿದೆ. ಆದರೆ ಇಬ್ಬರ ಮುಖಕ್ಕೂ ಪೆಟ್ಟು ಬಿದ್ದು ಗಾಯಗಳಾಗಿದ್ದರಿಂದ, ಹೊಲಿಗೆ (stitches) ಹಾಕಿಸಿಕೊಳ್ಳಲು ನಾವಿಬ್ಬರೂ ಆಸ್ಪತ್ರೆಗೆ ಒಟ್ಟಿಗೆ ಹೋಗಬೇಕಾಯಿತು” ಎಂದು ಬರ್ವಾಲ್ ವಿವರಿಸಿದರು.
ಆಸ್ಪತ್ರೆಯಲ್ಲಿ ನಡೆದ ತಮಾಷೆಯ ಸಂಭಾಷಣೆ:
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಪಾಕಿಸ್ತಾನಿ ಬಾಕ್ಸರ್ ಬರ್ವಾಲ್ ಬಳಿ ಬಂದು, “ಸಹೋದರ, ನಾನು ಒಂದು ಮಾತು ಹೇಳಲಾ?” ಎಂದು ಕೇಳಿದ್ದಾನೆ. ಬರ್ವಾಲ್ ಸಮ್ಮತಿಸಿದಾಗ, ಆತ “ನಿಮ್ಮ ಹೆಸರು ನರೇಂದರ್, ನಿಮ್ಮ ಕೋಚ್ ಹೆಸರು ನರೇಂದರ್ (ಆರ್ಮಿ ಕೋಚ್ ನರೇಂದರ್ ರಾಣಾ), ನಿಮ್ಮ ದೇಶದ ಪ್ರಧಾನ ಮಂತ್ರಿಯ ಹೆಸರೂ ನರೇಂದ್ರ! ನನಗೆ ಈ ‘ನರೇಂದ್ರ’ ಅನ್ನೋ ಹೆಸರು ಕೇಳಿದ್ರೆನೇ ದ್ವೇಷ ಬರುವಂತಾಗಿದೆ” ಎಂದು ಬೇಸರದಿಂದಲೇ ತಮಾಷೆಯಾಗಿ ಹೇಳಿದ್ದಾನಂತೆ.
ಈ ತಮಾಷೆಯ ಘಟನೆಯನ್ನು ನರೇಂದರ್ ಬರ್ವಾಲ್ ವಿವರವಾಗಿ ಹೇಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿದ್ದು ಬಿದ್ದು ನಕ್ಕಿದ್ದಾರೆ. ಸದ್ಯ ಈ ಹಳೆಯ ಘಟನೆಯ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕ್ರೀಡಾ ವಲಯದಲ್ಲಿ ಭಾರೀ ವೈರಲ್ ಆಗುತ್ತಿದೆ.





Leave a comment