ನವದೆಹಲಿ: ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ (CJP) ಆಯೋಜಿಸಿದ್ದ ಪ್ರತಿಭಟನೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನಾತ್ಮಕ ಘೋಷಣೆಗಳನ್ನು ಕೂಗಿ ಸುದ್ದಿಯಾಗಿದ್ದ 15 ವರ್ಷದ ಬಾಲಕಿ, ಇದೀಗ ವಿಡಿಯೋ ಮೂಲಕ ಬಹಿರಂಗವಾಗಿ ದೇಶದ ಜನರ ಬಳಿ ಕ್ಷಮೆಯಾಚಿಸಿದ್ದಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕಿಯು ಕೈಮುಗಿದು, “ನಾನು ಕನ್ನಾಟ್ ಪ್ಲೇಸ್‌ಗೆ ಬಂದಾಗ ಸ್ನೇಹಿತರ ಜೊತೆ ಪ್ರತಿಭಟನೆಗೆ ತೆರಳಿದ್ದೆ. ಅಲ್ಲಿದ್ದವರ ಪ್ರಚೋದನೆಗೆ ಒಳಗಾಗಿ ಈ ರೀತಿ ಅಸಭ್ಯ ಘೋಷಣೆಗಳನ್ನು ಕೂಗಿದೆ. ಇದು ನನ್ನ ಜೀವನದ ಮೊದಲ ಮತ್ತು ಕೊನೆಯ ತಪ್ಪು. ದೇಶದ ಜನತೆ ಹಾಗೂ ಪ್ರಧಾನಿಯವರ ಬಳಿ ಕ್ಷಮೆ ಕೇಳುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ” ಎಂದು ಹೇಳಿದ್ದಾಳೆ.
ಪ್ರಧಾನಿ ಮೋದಿ ಅಭಯ:
ಈ ಘಟನೆಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, “ನನ್ನ ಹಾಗೂ ನನ್ನ ದಿವಂಗತ ತಾಯಿಯವರ ವಿರುದ್ಧ ಬಳಸಿದ ನಿಂದನಾತ್ಮಕ ಮಾತುಗಳು ನೋವು ತಂದಿವೆ. ಆದರೆ ಯುವಜನತೆಗೆ ತಮ್ಮ ತಪ್ಪುಗಳಿಂದ ಕಲಿಯಲು ಅವಕಾಶ ನೀಡಬೇಕು. ಅವರನ್ನು ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರುವುದು ಮುಖ್ಯ” ಎಂದು ಹೇಳಿ ಕ್ಷಮಿಸಿರುವುದಾಗಿ ತಿಳಿಸಿದ್ದರು.
ಮುಂದುವರಿದ ಕಾನೂನು ಕ್ರಮ:
ಪ್ರಧಾನಿಯವರ ಕ್ಷಮೆಯಾಚನೆ ಸಂದೇಶದ ನಡುವೆಯೂ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಬಾಲಕಿಯ ವಿರುದ್ಧ ನೋಯ್ಡಾದಲ್ಲಿ ಎಫ್‌ಐಆರ್ (Zero FIR) ದಾಖಲಾಗಿದ್ದು, ಬಳಿಕ ಅದನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





Leave a comment