ದಾವಣಗೆರೆ: ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರಾ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗಿದೆ. ಬಹುಶಿಸ್ತೀಯ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ವೃತ್ತಿ ಆಧಾರಿತ, ಕೌಶಲ್ಯಯುತ, ಉದ್ಯೋಗ ಸೃಜನೆಯ ಪದವಿಗಳನ್ನು ನೀಡುವ ಉದ್ದೇಶವನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಹೊಂದಿದೆ ಎಂದು ಕುಲಪತಿ ಪ್ರೊ.ಬಿ.ಇ.ರಂಗಸ್ವಾಮಿ ತಿಳಿಸಿದರು.
ಕೌಶಲ್ಯಾಧಾರಿತ ತರಬೇತಿಗಾಗಿ ವಿಶ್ವವಿದ್ಯಾನಿಲಯವು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಆಸಕ್ತಿಯ ವಿಷಯದಲ್ಲಿ ಸಂಪೂರ್ಣ ತರಬೇತಿ ಪಡೆದು ವೃತ್ತಿ ಅಥವಾ ಸ್ವಯಂ ಉದ್ಯೋಗಕ್ಕೆ ಸಜ್ಜುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ. ರಂಗಸ್ವಾಮಿ ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಪಿಜಿ ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ (ಅಪರಾಧಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಅಧ್ಯಯನ ವಿಭಾಗ), ಪಿಜಿ ಡಿಪ್ಲೊಮಾ ಇನ್ ಫೈನಾನ್ಷಿಯಲ್ ಸರ್ವಿಸ್ (ವಾಣಿಜ್ಯಶಾಸ್ತ್ರ), ಪಿಜಿ ಡಿಪ್ಲೊಮಾ ಇನ್ ಡೇಟಾ ಅನಲೈಸಿಸ್ (ಅರ್ಥಶಾಸ್ತ್ರ ), ಪಿಜಿ ಡಿಪ್ಲೊಮಾ ಇನ್ ಫುಡ್ ಪ್ರೊಸೆಸಿಂಗ್, ಸೇಫ್ಟಿ ಅಂಡ್ ಕ್ವಾಲಿಟಿ ಮ್ಯಾನೇಜ್ಮೆಂಟ್ (ಆಹಾರ ತಂತ್ರಜ್ಞಾನ), ಡಿಪ್ಲೊಮಾ ಇನ್ ಯೋಗ (ಯೋಗ ವಿಜ್ಞಾನ) ಮತ್ತು ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗಾ (ಯೋಗ ವಿಜ್ಞಾನ) ಕಾರ್ಯಕ್ರಮಗಳಲ್ಲಿ ಅಧ್ಯಯನ ಮಾಡಬಹುದಾಗಿದೆ ಎಂದರು.
ಇದರ ಜೊತೆಗೆ ವಾಣಿಜ್ಯ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಶಿಕ್ಷಣ ವಿಭಾಗದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿವಿಧ ಕೋರ್ಸ್ಗಳಲ್ಲಿ ಕೌಶಲ್ಯ ಆಧಾರಿತ ಪ್ರಾಯೋಗಿಕ ಶಿಕ್ಷಣದ ಸರ್ಟಿಫಿಕೇಟ್ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್ಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.
ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಉದ್ಯೋಗ ಹುಡುಕಿಕೊಂಡು ಹೋಗುವ ಬದಲಾಗಿ, ಉದ್ಯಮಶೀಲರಾಗಿ ಉದ್ಯೋಗದಾತರಾಗಬೇಕು, ನಾಲ್ಕಾರು ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪದವಿಯೊಟ್ಟಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಲಿದೆ. ಇದಕ್ಕೆ ವೃತ್ತಿ ತರಬೇತಿ ಕೋರ್ಸ್ಗಳು ನೆರವಾಗಲಿವೆ. ಇದಕ್ಕೆ ಪೂರಕವಾಗಿ ಈಗಾಗಲೇ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಕಂಪನಿಗಳ ಜೊತೆಗೆ
ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರೊ.ರಂಗಸ್ವಾಮಿ ವಿವರಿಸಿದರು.
ವೃತ್ತಿ ಕೌಶಲ್ಯದ ಜೊತೆಗೆ ಸಂಶೋಧನೆಗೂ ವಿಶ್ವವಿದ್ಯಾನಿಲಯ ಆದ್ಯತೆ ನೀಡಿದೆ. ಈಗಾಗಲೇ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ವಿಶ್ವವಿದ್ಯಾಲಯಗಳ ಜೊತೆಗೆ ಸಂಶೋಧನಾ ಒಡಂಬಡಿಕೆಯೂ ಆಗಿದೆ. ಮುಂದಿನ ದಿನಗಳಲ್ಲಿ ಸಂಶೋಧನೆಗಾಗಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ವಿಶ್ವವಿದ್ಯಾನಿಲಯವನ್ನು ಉನ್ನತ ಮಟ್ಟಕ್ಕೆ ಒಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮೀಣ ಭಾಗದ ಅಥವಾ ಉದ್ಯೋಗಸ್ಥ ಯುವಜನರ ಪದವಿಯ ಕನಸನ್ನು ಈಡೇರಿಸುವ ಉದ್ದೇಶವೂ ವಿಶ್ವವಿದ್ಯಾಲಯಕ್ಕಿದೆ. ಯುಜಿಸಿ ನಿಯಮಾವಳಿ ಮತ್ತು ರಾಜ್ಯ ಸರ್ಕಾರದ ನೀತಿ ನಿರ್ಧಾರಗಳನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ, ಇ-ಲರ್ನಿಂಗ್ ಮತ್ತು ಹೈಬ್ರಿಡ್ ಬೋಧನಾ ವ್ಯವಸ್ಥೆಯನ್ನು ಕಲ್ಪಿಸುವ ಕೊಡುವ ಉದ್ದೇಶವಿದೆ ಎಂದು ಪ್ರೊ.ರಂಗಸ್ವಾಮಿ ತಿಳಿಸಿದರು.
ಗೋಷ್ಠಿಯಲ್ಲಿ ಹಣಕಾಸು ಅಧಿಕಾರಿ ಪ್ರೊ.ಆರ್.ಶಶಿಧರ, ಸಮಾಜ ವಿಜ್ಞಾನ ನಿಕಾಯದ ಪ್ರೊ.ಎಂ.ಯು. ಲೋಕೇಶ, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ನಿಕಾಯದ ಡೀನ್ ಪ್ರೊ.ಕೆ.ಟಿ.ಶ್ರೀನಿವಾಸ, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸತೀಶ್ ವಲ್ಲೇಪುರೆ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಉಪಸ್ಥಿತರಿದ್ದರು.





Leave a comment