Home ದಾವಣಗೆರೆ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಪ್ರಜಾಪ್ರಭುತ್ವದ ಕಗ್ಗೊಲೆ: ಬಿ. ಎನ್. ವಿನಾಯಕ್ ಆಕ್ರೋಶ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಪ್ರಜಾಪ್ರಭುತ್ವದ ಕಗ್ಗೊಲೆ: ಬಿ. ಎನ್. ವಿನಾಯಕ್ ಆಕ್ರೋಶ

Share
ವಿದ್ಯಾರ್ಥಿ
Share

ದಾವಣಗೆರೆ: ನೀಟ್ ಪತ್ರಿಕೆ ಸೋರಿಕೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಸಮರ್ಪಕ ನಿರ್ವಹಣೆ ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಹೋರಾಟ ಹತ್ತಿಕ್ಕಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಸಂವಿಧಾನ ವಿರೋಧಿ ಕೃತ್ಯ ಎಂದು ಕೆಪಿಸಿಸಿ ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರೂ ಆದ ದಾವಣಗೆರೆ ಕಾಂಗ್ರೆಸ್ ಎಸ್ಸಿ ಘಟಕದ ಉಪಾಧ್ಯಕ್ಷ ಬಿ. ಎನ್. ವಿನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಯುವಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಆಗ್ರಹಿಸಿದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಬ್ಬಾಳಿಕೆ ಹಾಗೂ ದೌರ್ಜನ್ಯದ ಮೂಲಕ ಹೋರಾಟ ತಡೆಗೆ ಯತ್ನಿಸಿರುವುದು ಖಂಡನೀಯ. ದೇಶದ ಯುವಕರ ಮನಸಿನಲ್ಲಿ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಮತ ಪಡೆಯುವ ಬಿಜೆಪಿಯು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರೆ ಪೊಲೀಸರಿಂದ ಲಾಠಿ ಏಟು ಕೊಡಿಸಿದೆ. ಈ ಮೂಲಕ ಅರಾಜಕತೆ ಸೃಷ್ಟಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವುದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಸಂಸತ್ ನ ಮಳೆಗಾಲದ ಮೊದಲ ದಿನದ ಅಧಿವೇಶನ ನಡೆದ ದಿನವೇ ಜೆನ್ ಜಿ ಮತ್ತು ಯುವ ಜನರ ಆಕ್ರೋಶದ ಕಟ್ಟೆ ಒಡೆಯಲು ಕಾರಣವೇ ಧರ್ಮೇಂದ್ರ ಪ್ರಧಾನ್. ನೀಟ್ ಸೇರಿದಂತೆ ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದರಿಂದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಇದಕ್ಕೆ ಯಾರು ಹೊಣೆ. ಚುನಾವಣೆ ಬಂತೆಂದರೆ ಯುವಕರನ್ನೇ ಗುರಿಯಾಗಿಸಿಕೊಂಡು ಭಾಷಣ ಮಾಡುವ ನರೇಂದ್ರ ಮೋದಿ ಅವರಿಗೆ ಇದು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ದೇಶದ ಆಸ್ತಿಯೇ ಯುವಶಕ್ತಿ. ಈ ಶಕ್ತಿ ಸಿಡಿದೆದ್ದರೆ ಯಾವ ಸರ್ಕಾರವೂ ಉಳಿಯುವುದಿಲ್ಲ. ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರು ಉಪವಾಸ ಸತ್ಯಾಗ್ರಹ ನಡೆಸಿದರೆ ಅಲ್ಲಿಂದ ಬಲವಂತಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಿಜೆಪಿ ಕೇವಲ ಅಧಿಕಾರದ ಹಪಾಹಪಿಗೆ ಬಿದ್ದಿದೆಯೇ ಹೊರತು ದೇಶದ ಜನರ, ಯುವಕರ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಈಡೇರಿಸುವತ್ತ ಹೆಜ್ಜೆ ಇಡದಿರುವುದು ಈ ದೇಶದ ದುರಂತ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ದೇಶದ ಯುವಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಬಿ. ಎನ್. ವಿನಾಯಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles