Home ದಾವಣಗೆರೆ “ಚತುರ್ ಹೇಳಿದ್ದು ತಪ್ಪು…” ಕೊನೆಗೂ ಮೌನ ಮುರಿದ ಅಮೀರ್ ಖಾನ್! ಸೋನಮ್ ವಾಂಗ್ಚುಕ್ ಬೆಂಬಲಿಸಿ ಕೊಟ್ಟ ಹೇಳಿಕೆ ಏನು?
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

“ಚತುರ್ ಹೇಳಿದ್ದು ತಪ್ಪು…” ಕೊನೆಗೂ ಮೌನ ಮುರಿದ ಅಮೀರ್ ಖಾನ್! ಸೋನಮ್ ವಾಂಗ್ಚುಕ್ ಬೆಂಬಲಿಸಿ ಕೊಟ್ಟ ಹೇಳಿಕೆ ಏನು?

Share
ಅಮೀರ್ ಖಾನ್
Share

ನವದೆಹಲಿ/ಲಂಡನ್: ಖ್ಯಾತ ಶಿಕ್ಷಣ ತಜ್ಞ ಮತ್ತು ಲಡಾಖ್ ಮೂಲದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ಬೆನ್ನಲ್ಲೇ, ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ನವದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ಯುವಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ನೀಟ್ (NEET) ಪೇಪರ್ ಸೋರಿಕೆ ವಿರೋಧಿಸಿ ಸೋನಮ್ ವಾಂಗ್ಚುಕ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್ (BFI) ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಮೀರ್ ಖಾನ್ ಅವರಿಗೆ, ಸೋನಮ್ ವಾಂಗ್ಚುಕ್ ಸತ್ಯಾಗ್ರಹದ ಕುರಿತು ಪ್ರಶ್ನೆ ಕೇಳಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಅವರು, ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರಲ್ಲದೆ, ‘3 ಇಡಿಯಟ್ಸ್’ ಚಿತ್ರದ ತಮ್ಮ ಪಾತ್ರದ ಕುರಿತು ವರ್ಷಗಳಿಂದ ಹರಡಿದ್ದ ದೊಡ್ಡ ಸುಳ್ಳೊಂದನ್ನು ಬಯಲು ಮಾಡಿದರು.

‘3 ಇಡಿಯಟ್ಸ್’ ಚಿತ್ರದ ‘ಫುನ್ಸುಕ್ ವಾಂಗ್ಡು’ ಸೋನಮ್ ವಾಂಗ್ಚುಕ್ ಅಲ್ಲವೇ ಅಲ್ಲ!

2009ರಲ್ಲಿ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದ್ದ ‘3 ಇಡಿಯಟ್ಸ್’ ಚಿತ್ರದ ಅಮೀರ್ ಖಾನ್ ಅವರ ಐಕಾನಿಕ್ ಪಾತ್ರ ‘ಫುನ್ಸುಕ್ ವಾಂಗ್ಡು’ (ಅಥವಾ ರಣಚೋ), ಸೋನಮ್ ವಾಂಗ್ಚುಕ್ ಅವರ ನಿಜ ಜೀವನದ ಪ್ರೇರಣೆಯಿಂದ ಸೃಷ್ಟಿಯಾದದ್ದು ಎಂಬ ಬಲವಾದ ನಂಬಿಕೆ ಸಾರ್ವಜನಿಕರಲ್ಲಿದೆ. ಇತ್ತೀಚೆಗೆ ಚಿತ್ರದಲ್ಲಿ ‘ಚತುರ್’ ಪಾತ್ರ ಮಾಡಿದ್ದ ನಟ ಓಮಿ ವೈದ್ಯ ಕೂಡ ವಿಡಿಯೋವೊಂದನ್ನು ಹಂಚಿಕೊಂಡು, “ನನ್ನ ಫುನ್ಸುಕ್ ವಾಂಗ್ಡು ಸಾಯಲು ನಾನು ಬಿಡುವುದಿಲ್ಲ” ಎಂದು ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸಿದ್ದರು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಅಮೀರ್ ಖಾನ್, “ಅದು ಸಂಪೂರ್ಣ ತಪ್ಪು ಕಲ್ಪನೆ. ಚಿತ್ರ ಮಾಡುವ ಸಂದರ್ಭದಲ್ಲಿ ನನಗಾಗಲಿ, ನಿರ್ದೇಶಕ ರಾಜಕುಮಾರ್ ಹಿರಾನಿ ಹಾಗೂ ಬರಹಗಾರ ಅಭಿಜಾತ್ ಜೋಷಿ ಅವರಿಗಾಗಲಿ ಸೋನಮ್ ವಾಂಗ್ಚುಕ್ ಅವರ ಬಗ್ಗೆ ತಿಳಿದೇ ಇರಲಿಲ್ಲ. ಇತ್ತೀಚೆಗೆ ಚತುರ್ (ಓಮಿ ವೈದ್ಯ) ಮಾತನಾಡಿದ ವಿಡಿಯೋ ನೋಡಿದೆ, ಆದರೆ ಆತ ಹೇಳುತ್ತಿರುವುದು ತಪ್ಪು” ಎಂದು ನೇರವಾಗಿ ಸ್ಪಷ್ಟಪಡಿಸಿದರು.

“ಗೌರವಿಸಲು ಯಾವುದೇ ಸಿನಿಮಾದ ಲಿಂಕ್ ಬೇಡ”

ಮುಂದುವರಿದು ಮಾತನಾಡಿದ ಅಮೀರ್, “ಸೋನಮ್ ವಾಂಗ್ಚುಕ್ ಅವರು ಸಮಾಜಕ್ಕೆ ಮಾಡುತ್ತಿರುವ ಕೆಲಸಗಳು ಅದ್ಭುತವಾಗಿವೆ. ಅವರ ಸಾಧನೆಯನ್ನು ನಾವು ಗೌರವಿಸಲು ಅವರು 3 ಇಡಿಯಟ್ಸ್ ಚಿತ್ರದ ಪಾತ್ರಕ್ಕೆ ಪ್ರೇರಣೆಯಾಗಿರಬೇಕು ಎಂದೇನೂ ಇಲ್ಲ. ಸ್ವತಃ ಸೋನಮ್ ಅವರೇ ಈ ಹಿಂದೆ ತಮ್ಮ ಪಾತ್ರ ಆ ಚಿತ್ರದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ” ಎಂದರು.

ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅಮೀರ್ ಮನವಿ

ಸದ್ಯ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೀರ್ ಖಾನ್ ಆತಂಕ ವ್ಯಕ್ತಪಡಿಸಿದ್ದು, “ನಾವೆಲ್ಲರೂ ಅವರ ಆರೋಗ್ಯದ ಬಗ್ಗೆ ಕಳವಳ ಹೊಂದಿದ್ದೇವೆ. ಅವರು ಶೀಘ್ರದಲ್ಲೇ ಉಪವಾಸ ಕೈಬಿಟ್ಟು ತಮ್ಮ ಆರೋಗ್ಯದ ಕಡೆ ಗಮನಹರಿಸಲಿ ಎಂದು ಪ್ರಾರ್ಥಿಸುತ್ತೇವೆ” ಎಂದು ವಿನಂತಿಸಿದ್ದಾರೆ.

ಕಿರಣ್ ರಾವ್, ಕತ್ರಿನಾ ಕೈಫ್ ಸೇರಿದಂತೆ ಹಲವು ಗಣ್ಯರು ಈಗಾಗಲೇ ಸೋನಮ್ ವಾಂಗ್ಚುಕ್ ಅವರ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ತಕ್ಷಣವೇ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *