Home ಕ್ರೈಂ ನ್ಯೂಸ್ ಕೋಟಾ ಆಘಾತಕಾರಿ ಘಟನೆ: ಹೆರಿಗೆ ಬೆನ್ನಲ್ಲೇ ಕಿಡ್ನಿ ವೈಫಲ್ಯ, ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ತಾಯಂದಿರ ಪತ್ರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೋಟಾ ಆಘಾತಕಾರಿ ಘಟನೆ: ಹೆರಿಗೆ ಬೆನ್ನಲ್ಲೇ ಕಿಡ್ನಿ ವೈಫಲ್ಯ, ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ತಾಯಂದಿರ ಪತ್ರ!

Share
ಕಿಡ್ನಿ
Share

ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯ ಸರ್ಕಾರಿ ಹೊಸ ವೈಡ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (NMCH) ಹೆರಿಗೆಯ ನಂತರ ತೀವ್ರ ಸ್ವರೂಪದ ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ಐದು ಜನ ಬಾಣಂತಿಯರು ಮತ್ತು ಅವರ ಕುಟುಂಬಸ್ಥರು ತೀವ್ರ ಆಕ್ರೋಶ ಹಾಗೂ ಹತಾಶೆ ಹೊರಹಾಕಿದ್ದಾರೆ. ತಮಗೆ ತಕ್ಷಣವೇ ಕಿಡ್ನಿ ಕಸಿ (Kidney Transplant) ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ದಯಾಮರಣಕ್ಕೆ (Euthanasia) ಅನುಮತಿ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ಪತ್ರ ಬರೆದಿದ್ದಾರೆ.

ಘಟನೆಯ ಹಿನ್ನೆಲೆ:

ಕಳೆದ ಮೇ ತಿಂಗಳಲ್ಲಿ ಸಿಸೇರಿಯನ್ (C-Section) ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಈ ಮಹಿಳೆಯರಿಗೆ ಕಲುಷಿತ ಗ್ಲುಕೋಸ್ ಅಥವಾ ನಕಲಿ ಔಷಧಿಗಳನ್ನು ನೀಡಿದ್ದರಿಂದಲೇ ಇವರ ಎರಡು ಮೂತ್ರಪಿಂಡಗಳು ಸಂಪೂರ್ಣ ನಿಷ್ಕ್ರಿಯಗೊಂಡಿವೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ 68 ದಿನಗಳಲ್ಲಿ ಇವರಿಗೆ ಬರೋಬ್ಬರಿ 32 ಬಾರಿ ಡಯಾಲಿಸಿಸ್ ಮಾಡಲಾಗಿದ್ದು, ಇದರಿಂದ ತೀವ್ರ ದೈಹಿಕ ಯಾತನೆ ಅನುಭವಿಸುತ್ತಿದ್ದಾರೆ. ಇದೇ ಸೋಂಕಿನ ಕಾರಣದಿಂದಾಗಿ ಈಗಾಗಲೇ ಐದು ಜನ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕುಟುಂಬಗಳ ಆರ್ಥಿಕ ಪರಿಸ್ಥಿತಿ ತತ್ತರ:

ಬಾಧಿತ ಮಹಿಳೆಯರ ಪೈಕಿ ರಾಗಿಣಿ ಮೀನಾ, ಆರತಿ ಚೋಪ್‌ದಾರ್, ಪಿಂಕಿ ಏರ್ವಾಲ್, ಸುಶೀಲಾ ಮಹಾವರ್ ಮತ್ತು ಧನ್ನಿ ಸುಮನ್ ಸೇರಿದ್ದಾರೆ. ಇವರ ಚಿಕಿತ್ಸೆಗೆ ಹಣ ಹೊಂದಿಸಲು ಕುಟುಂಬಗಳು ತಮ್ಮ ಜೀವನಾಧಾರವಾಗಿದ್ದ ಟ್ಯಾಕ್ಸಿ, ಆಸ್ತಿ ಮತ್ತು ಒಡವೆಗಳನ್ನು ಮಾರಿಕೊಂಡಿದ್ದಾರೆ. ಇವರ ಪತಿ ಅಸಹಾಯಕರಾಗಿ ಕೆಲಸಗಳನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. “ನಾವು ಬದುಕಿದ್ದೂ ಹೆಣದಂತಾಗಿದ್ದೇವೆ, ನಮಗೆ ಖಾಯಂ ಪರಿಹಾರ ನೀಡದಿದ್ದರೆ ಡಯಾಲಿಸಿಸ್ ನಿಲ್ಲಿಸಿ ಸಾವನ್ನಪ್ಪುತ್ತೇವೆ” ಎಂದು ಕುಟುಂಬಗಳು ಜಿಲ್ಲಾಡಳಿತಕ್ಕೆ 48 ಗಂಟೆಗಳ ಗಡುವು ನೀಡಿವೆ.

ಆಸ್ಪತ್ರೆ ಮತ್ತು ವೈದ್ಯರ ಹೇಳಿಕೆ:

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ನೀಲೇಶ್ ಜೈನ್, ಮಹಿಳೆಯರ ಆರೋಗ್ಯ ಸದ್ಯ ಸ್ಥಿರವಾಗಿದ್ದು ಮನೆಗೆ ತೆರಳಬಹುದು ಎಂದು ಹೇಳಿದ್ದಾರೆ. ತೀವ್ರ ಕಿಡ್ನಿ ವೈಫಲ್ಯಕ್ಕೆ ಒಳಗಾದ ರೋಗಿಯನ್ನು ಕನಿಷ್ಠ 3 ರಿಂದ 6 ತಿಂಗಳುಗಳ ಕಾಲ ನಿರಂತರ ನಿಗಾದಲ್ಲಿ ಇರಿಸಿದ ನಂತರವಷ್ಟೇ ಕೊನೆಯ ಹಂತದ ಕಿಡ್ನಿ ಕಸಿಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ, ಹಾಗಾಗಿ ಈಗಲೇ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಬಗ್ಗೆ ಚರ್ಚಿಸುವುದು ಅಕಾಲಿಕ ಎಂದಿದ್ದಾರೆ. ಒಂದು ವೇಳೆ ರೋಗಿಗಳು ಡಯಾಲಿಸಿಸ್ ನಿರಾಕರಿಸಿದರೆ ದೇಹದಲ್ಲಿ ವಿಷಕಾರಿ ತ್ಯಾಜ್ಯ ಹೆಚ್ಚಾಗಿ ಪ್ರಾಣಕ್ಕೆ ಅಪಾಯವಾಗಲಿದ್ದು, ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

ಪ್ರಸ್ತುತ ರಾಜಸ್ಥಾನ ಸರ್ಕಾರವು ಈ ಆಸ್ಪತ್ರೆಯ ಸೋಂಕು ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

Share

Leave a comment

Leave a Reply

Your email address will not be published. Required fields are marked *