Home ಕ್ರೈಂ ನ್ಯೂಸ್ ಪುಣೆ ಉದ್ಯಮಿ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಆರೋಪಿ ಸಹೋದರನಿಗೆ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ ಮಾಡಿದ ವಕೀಲ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪುಣೆ ಉದ್ಯಮಿ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಆರೋಪಿ ಸಹೋದರನಿಗೆ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ ಮಾಡಿದ ವಕೀಲ!

Share
ಪುಣೆ
Share

ಪುಣೆ: ಮಹಾರಾಷ್ಟ್ರದ ಪುಣೆಯ ಪ್ರಖ್ಯಾತ ರಿಯಾಲ್ಟರ್ ಕೆಟನ್ ಅಗರ್ವಾಲ್ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಪ್ರಕರಣದ ಮುಖ್ಯ ಆರೋಪಿ ಸಿಯಾ ಗೋಯಲ್ ಅವರ ಸಹೋದರ ಸಾಹಿಲ್ ಗೋಯಲ್‌ಗೆ ವಕೀಲ ಆಶುತೋಷ್ ಶ್ರೀವಾಸ್ತವ್ 10 ಕೋಟಿ ರೂಪಾಯಿಗಳ ಭಾರಿ ಮೊತ್ತದ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ತನ್ನ ವೃತ್ತಿಪರ ಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಕೈಗೊಂಡಿರುವುದಾಗಿ ವಕೀಲರು ತಿಳಿಸಿದ್ದಾರೆ.

ವಿವಾದದ ಹಿನ್ನೆಲೆ ಏನು?

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಹಿಲ್ ಗೋಯಲ್, ತಮ್ಮ ಕುಟುಂಬವು ವಕೀಲ ಆಶುತೋಷ್ ಶ್ರೀವಾಸ್ತವ್ ಅವರನ್ನು ನೇಮಿಸಿಯೇ ಇಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ವಕೀಲರು ತಮ್ಮ ಸಹೋದರಿ ಸಿಯಾ ಗೋಯಲ್ ಅವರನ್ನು ವಂಚಿಸಿ, ಮರಳುಮಾಡಿ ಕಾನೂನು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಜೊತೆಗೆ ತಮ್ಮ ಕುಟುಂಬಕ್ಕೆ ವಕೀಲರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದೂ ಸಾಹಿಲ್ ದೂರಿದ್ದರು.

ಕೋರ್ಟ್‌ನಲ್ಲೂ ಗದ್ದಲ:

ಈ ನಡುವೆ ವಡ್ಗಾಂವ್ ಮಾವಲ್ ನ್ಯಾಯಾಲಯದಲ್ಲಿ ಸೋಮವಾರ ಈ ವಿವಾದ ಬಹಿರಂಗವಾಗಿ ಸ್ಫೋಟಗೊಂಡಿದೆ. ವಕೀಲ ಶ್ರೀವಾಸ್ತವ್ ಅವರು ಸಿಯಾ ಸಹಿ ಮಾಡಿರುವ ‘ವಕಾಲತ್ತುನಾಮೆ’ಯನ್ನು ಕೋರ್ಟ್‌ಗೆ ಸಲ್ಲಿಸಿ ತಾನೇ ಆಕೆಯ ಪರ ವಕೀಲ ಎಂದು ವಾದಿಸಿದರು. ಆದರೆ, ಸ್ವತಃ ಆರೋಪಿ ಸಿಯಾ ಗೋಯಲ್ ನ್ಯಾಯಾಧೀಶರ ಮುಂದೆ ನಿಂತು, “ಶ್ರೀವಾಸ್ತವ್ ನನ್ನ ವಕೀಲರಲ್ಲ, ವಿಪುಲ್ ದುಶಿಂಗ್ ನನ್ನ ಪರ ವಕೀಲರು” ಎಂದು ಸ್ಪಷ್ಟಪಡಿಸಿದಳು. ಸಾಹಿಲ್ ಕುಟುಂಬ ಕೂಡ ವಿಪುಲ್ ದುಶಿಂಗ್ ಅವರನ್ನೇ ಅಧಿಕೃತವಾಗಿ ನೇಮಕ ಮಾಡಿರುವುದಾಗಿ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ವಕೀಲರ ವಾದವೇನು?

ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಅಡ್ವೊಕೇಟ್ ಆಶುತೋಷ್ ಶ್ರೀವಾಸ್ತವ್, “ನಮ್ಮ ಕಾನೂನು ತಂಡ ಸಿಯಾ ಗೋಯಲ್ ಅವರನ್ನು ನೇರವಾಗಿ ಭೇಟಿಯಾಗಿತ್ತು. ಆಕೆ ಮೇಜರ್ ಆಗಿದ್ದು, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ಆಕೆಯೇ ಸ್ವಇಚ್ಛೆಯಿಂದ ನಮಗೆ ವಕಾಲತ್ತುನಾಮೆ ಸೈನ್ ಮಾಡಿಕೊಟ್ಟಿದ್ದಾಳೆ. ಸಾಹಿಲ್ ಗೋಯಲ್ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವರು ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ 10 ಕೋಟಿ ರೂ. ಪರಿಹಾರ ನೀಡಬೇಕು” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕೊಲೆ ಪ್ರಕರಣದ ಹಿನ್ನೆಲೆ:

20 ವರ್ಷದ ಸಿಯಾ ಗೋಯಲ್ ತನಗೆ ನಿಶ್ಚಿತಾರ್ಥವಾಗಿದ್ದ ರಿಯಾಲ್ಟರ್ ಕೆಟನ್ ಅಗರ್ವಾಲ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಮದುವೆ ನಿಲ್ಲಿಸಿದರೆ ಕುಟುಂಬದ ಗೌರವ ಹೋಗುತ್ತದೆ ಎಂಬ ಕಾರಣಕ್ಕೆ, ತನ್ನ ಪ್ರಿಯಕರ ಚೌಧರಿ (22) ಜೊತೆ ಸೇರಿ ಕೆಟನ್‌ನನ್ನು ಪುಣೆಯ ಲೋಹಗಢ್ ಕೋಟೆಯ ಕಡಿದಾದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ ಎಂಬ ಆರೋಪದಡಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸದ್ಯ ಡಿಲೀಟ್ ಮಾಡಲಾದ ಡಿಜಿಟಲ್ ಪುರಾವೆಗಳ ಮರುಪಡೆಯುವಿಕೆ ಹಾಗೂ ನಾಪತ್ತೆಯಾಗಿರುವ ಕೆಟನ್ ಪಾಸ್‌ಪೋರ್ಟ್ ಪತ್ತೆಗಾಗಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles