ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನವೇ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ ತ್ಯಾಗಕ್ಕೆ ರಾಹುಲ್ ಶ್ಲಾಘನೆ:
ಹೈಕಮಾಂಡ್ ಸೂಚನೆಯಂತೆ ಅಧಿಕಾರ ಹಸ್ತಾಂತರದ ಸೂತ್ರಕ್ಕೆ ಬದ್ಧರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರ ನಡವಳಿಕೆಗೆ ರಾಹುಲ್ ಗಾಂಧಿ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. “ಪಕ್ಷಕ್ಕೆ ನೀಡಿದ ಮಾತಿನಂತೆ ಕುರ್ಚಿಯನ್ನು ತ್ಯಾಗ ಮಾಡುವ ಮೂಲಕ ನೀವು ಇತರ ಕಾಂಗ್ರೆಸ್ ನಾಯಕರಿಗೆ ಮಾದರಿಯಾಗಿದ್ದೀರಿ. ಪಕ್ಷ ಮತ್ತು ಸಿದ್ದಾಂತದ ಬಗ್ಗೆ ನಿಮಗಿರುವ ಬದ್ಧತೆ ಕಂಡು ನನಗೆ ಹೆಮ್ಮೆಯಾಗುತ್ತಿದೆ” ಎಂದು ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಪಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಖಡಕ್ ಷರತ್ತು:
ಹೊಸ ಸರ್ಕಾರ ರಚನೆ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಂಪುಟ ರಚನೆ ಪ್ರಕ್ರಿಯೆಯ ನಡುವೆಯೇ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಪ್ರಮುಖ ಷರತ್ತೊಂದನ್ನು ಇಟ್ಟಿದ್ದಾರೆ. ರಾಜ್ಯದಲ್ಲಿ ಉಪಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸುವುದಾದರೆ ಎಲ್ಲಾ ಪ್ರಮುಖ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಸಿಗಬೇಕು ಎಂದು ಅವರು ವಾದಿಸಿದ್ದಾರೆ. ಒಂದು ವೇಳೆ ಡಿಸಿಎಂ ಹುದ್ದೆ ನೀಡುವುದಾದರೆ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಒಬಿಸಿ (OBC) ಮತ್ತು ಲಿಂಗಾಯತ ಸಮುದಾಯದ ತಲಾ ಒಬ್ಬೊಬ್ಬ ಪ್ರತಿನಿಧಿಗೆ ಈ ಹುದ್ದೆ ನೀಡಬೇಕು. ಇಂತಹ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳದಿದ್ದರೆ ಹೆಚ್ಚುವರಿ ಡಿಸಿಎಂ ಹುದ್ದೆಗಳ ಅಗತ್ಯವೇ ಇಲ್ಲ ಎಂದು ಹೈಕಮಾಂಡ್ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಗ ಯತೀಂದ್ರಗೆ ಪ್ರಮುಖ ಖಾತೆಗಾಗಿ ಬೇಡಿಕೆ:
ತಮ್ಮ ನಿಷ್ಠಾವಂತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪಟ್ಟಿಯ ಜೊತೆಗೆ, ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೂತನ ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಯತೀಂದ್ರ ಅವರಿಗೆ ವೈದ್ಯಕೀಯ ಶಿಕ್ಷಣ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ನೀಡುವಂತೆ ಕೇಳಲಾಗಿದ್ದು, ಪರ್ಯಾಯವಾಗಿ ಈ ಹಿಂದೆ ಡಿ.ಕೆ. ಶಿವಕುಮಾರ್ ಅವರ ಬಳಿ ಇದ್ದ ಜಲಸಂಪನ್ಮೂಲ ಅಥವಾ ಕೈಗಾರಿಕಾ ಇಲಾಖೆಯನ್ನು ನೀಡುವಂತೆ ಹೈಕಮಾಂಡ್ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ ಎನ್ನಲಾಗಿದೆ.
ರಾಷ್ಟ್ರ ರಾಜಕಾರಣ ತಿರಸ್ಕರಿಸಿದ ಸಿದ್ದರಾಮಯ್ಯ:
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ನಿಂದ ರಾಜ್ಯಸಭಾ ಸದಸ್ಯತ್ವದ ಆಫರ್ ನೀಡಲಾಗಿತ್ತು. ಆದರೆ ಅದನ್ನು ನಯವಾಗಿಯೇ ತಿರಸ್ಕರಿಸಿರುವ ಅವರು, “ನಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲ, ಕರ್ನಾಟಕದ ರಾಜಕಾರಣದಲ್ಲೇ ಉಳಿಯಲು ಬಯಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಶನಿವಾರ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಅಂತಿಮ ಪಟ್ಟಿಯನ್ನು ರಣದೀಪ್ ಸುರ್ಜೇವಾಲಾ ಅವರಿಗೆ ಹಸ್ತಾಂತರಿಸಲಿದ್ದಾರೆ.
- Deputy CM formula
- DK Shivakumar CM
- Karnataka Cabinet expansion
- Karnataka Political Updates
- Mallikarjun Kharge
- Rahul Gandhi
- Siddaramaiah resigns
- Yathindra Siddaramaiah
- ಉಪಮುಖ್ಯಮಂತ್ರಿ ರೇಸ್
- ಕರ್ನಾಟಕ ಕಾಂಗ್ರೆಸ್ ಸಂಪುಟ
- ಕರ್ನಾಟಕ ರಾಜಕೀಯ ಸುದ್ದಿಗಳು
- ಡಿ ಕೆ ಶಿವಕುಮಾರ್ ಸಿಎಂ
- ಮಲ್ಲಿಕಾರ್ಜುನ ಖರ್ಗೆ
- ಯತೀಂದ್ರ ಸಿದ್ದರಾಮಯ್ಯ
- ರಾಹುಲ್ ಗಾಂಧಿ
- ಸಿದ್ದರಾಮಯ್ಯ ರಾಜೀನಾಮೆ





Leave a comment