Home ದಾವಣಗೆರೆ ಕರ್ನಾಟಕದ ನಾಯಕತ್ವ ಬದಲಾವಣೆ ಒಂದು ಸ್ಪಷ್ಟ ಸಂದೇಶ: 2029ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಹೊಸ ರಣತಂತ್ರ
ದಾವಣಗೆರೆನವದೆಹಲಿಬೆಂಗಳೂರು

ಕರ್ನಾಟಕದ ನಾಯಕತ್ವ ಬದಲಾವಣೆ ಒಂದು ಸ್ಪಷ್ಟ ಸಂದೇಶ: 2029ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಹೊಸ ರಣತಂತ್ರ

Share
ರಾಹುಲ್ ಗಾಂಧಿ
Share

ನವದೆಹಲಿ: ಕರ್ನಾಟಕ ರಾಜಕೀಯದಲ್ಲಿ ಬಹುದಿನಗಳಿಂದ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಕೊನೆಗೂ ಅಂತ್ಯ ಕಂಡಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದ ಉದಯದ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದೃಢ ನಿರ್ಧಾರ ಮತ್ತು ಹೊಸ ರಾಜಕೀಯ ರಣತಂತ್ರ ಕೆಲಸ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ನವೆಂಬರ್‌ನಿಂದಲೇ ತೆರೆಮರೆಯಲ್ಲಿ ನಡೆಯುತ್ತಿದ್ದ ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ಮುದ್ರೆ ಒತ್ತಿದ್ದಾರೆ.

ರಾಹುಲ್ ಗಾಂಧಿ ಮನವೊಲಿಕೆ:

ದೆಹಲಿಯಲ್ಲಿ ನಡೆದ ಸುಮಾರು 35 ನಿಮಿಷಗಳ ಮುಖಾಮುಖಿ ಸಭೆಯಲ್ಲಿ, ರಾಷ್ಟ್ರೀಯ ರಾಜಕಾರಣದ ‘ದೊಡ್ಡ ಚಿತ್ರಣ’ ಮತ್ತು ಮುಂಬರುವ 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಬದಲಾವಣೆಗೆ ಸಹಕರಿಸುವಂತೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ಮನವೊಲಿಸಿದರು. ರಾಜ್ಯದಲ್ಲಿ ತಮ್ಮ ನಾಯಕತ್ವದಲ್ಲೇ ಪಕ್ಷ ಅಧಿಕಾರಕ್ಕೆ ಬರಲು ಉತ್ತಮ ಅವಕಾಶವಿದೆ ಎಂದು ಸಿದ್ದರಾಮಯ್ಯ ವಾದಿಸಿದರೂ, ಹೈಕಮಾಂಡ್ ಈ ಬಾರಿ ತೀರ್ಮಾನಕ್ಕೆ ಬದ್ಧವಾಗಿತ್ತು.

ಹಳೆಯ ತಪ್ಪುಗಳಿಂದ ಕಲಿತ ಪಾಠ:

ಈ ಹಿಂದೆ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್ ಹಾಗೂ ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್-ಟಿ.ಎಸ್. ಸಿಂಗ್ ದೇವ್ ನಡುವಿನ ಆಂತರಿಕ ಕಲಹವನ್ನು ಸಕಾಲದಲ್ಲಿ ಬಗೆಹರಿಸದ ಕಾರಣ ಕಾಂಗ್ರೆಸ್ ಆ ರಾಜ್ಯಗಳನ್ನು ಕಳೆದು ಕೊಳ್ಳಬೇಕಾಯಿತು. ಆ ತಪ್ಪುಗಳನ್ನು ಕರ್ನಾಟಕದಲ್ಲಿ ಮರುಕಳಿಸದಂತೆ ತಡೆಯಲು ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ವೇಗವಾಗಿ ಮತ್ತು ದೃಢವಾಗಿ ನಿರ್ಧಾರ ಕೈಗೊಂಡಿದೆ. ಕೇರಳದ ಮುಖ್ಯಮಂತ್ರಿ ರೇಸ್‌ನಲ್ಲೂ ವೋಟರ್‌ಗಳ ನಾಡಿಮಿಡಿತ ಅರಿತು ಹೈಕಮಾಂಡ್ ತನ್ನ ನಿರ್ಧಾರವನ್ನು ಬದಲಿಸಿಕೊಂಡ ಉದಾಹರಣೆ ಇತ್ತೀಚೆಗಷ್ಟೇ ನಡೆದಿತ್ತು.

ಒಟ್ಟಾರೆಯಾಗಿ, ಕರ್ನಾಟಕದ ಈ ನಾಯಕತ್ವ ಬದಲಾವಣೆಯು ಕಾಂಗ್ರೆಸ್ ಇನ್ನು ಮುಂದೆ ಪ್ರಾದೇಶಿಕ ಭಿನ್ನಾಭಿಪ್ರಾಯಗಳನ್ನು ಹೆಚ್ಚು ದಿನ ಬೆಳೆಯಲು ಬಿಡುವುದಿಲ್ಲ ಮತ್ತು 2029ರ ಸಾರ್ವತ್ರಿಕ ಚುನಾವಣೆಯ ಗೆಲುವೊಂದೇ ಪಕ್ಷದ ಏಕೈಕ ಆದ್ಯತೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles