ಭೋಪಾಲ್: ಮದುವೆಯಾಗದ ಯುವಕರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು, ಅನಾಥಾಶ್ರಮದ ಹುಡುಗಿಯರ ಜೊತೆ ಸಾಮೂಹಿಕ ವಿವಾಹ ಮಾಡಿಸುವುದಾಗಿ ನಂಬಿಸಿ 42 ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ದೇವಾಸ್‌ನಲ್ಲಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?:
ಮದುವೆಗಾಗಿ ವಧು ಸಿಗದೆ ಕಂಗಾಲಾಗಿದ್ದ ಕುಟುಂಬಗಳನ್ನೇ ಟಾರ್ಗೆಟ್ ಮಾಡಿದ್ದ ವಂಚಕ ಜಾಲ, ಇಂದೋರ್‌ನ ಅನಾಥಾಶ್ರಮದಲ್ಲಿದ್ದ ಯುವತಿಯರ ಫೋಟೋ ಎಂದು ಸಾಮಾಜಿಕ ಜಾಲತಾಣಗಳಿಂದ ಡೌನ್‌ಲೋಡ್ ಮಾಡಿದ ಮಾಡೆಲ್‌ಗಳ ಫೋಟೋಗಳನ್ನು ಯುವಕರಿಗೆ ತೋರಿಸಿ ನಂಬಿಸಿದ್ದರು. ಮೇ 25 ರಂದು ದೇವಾಸ್‌ನ ರಾಧಾಗಂಜ್ ಕ್ಲಬ್ ಮೈದಾನದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ನಂಬಿಸಿ, ಪ್ರತಿ ಕುಟುಂಬದಿಂದ 12,000 ರೂ. ನಿಂದ ಹಿಡಿದು 25,000 ರೂ. ವರೆಗೆ ಹಣ ವಸೂಲಿ ಮಾಡಿದ್ದರು. ಹೀಗೆ ಒಟ್ಟಾರೆ 10 ಲಕ್ಷಕ್ಕೂ ಅಧಿಕ ಹಣವನ್ನು ಆರೋಪಿಗಳು ಪಂಗನಾಮ ಹಾಕಿದ್ದಾರೆ.
ಮಂಟಪವೂ ಇಲ್ಲ, ವಧುವೂ ಇಲ್ಲ!:
ಮೇ 24 ರಂದು ಮುಂಜಾನೆ 8 ಗಂಟೆಯಿಂದಲೇ ವರರು ಹಾಗೂ ಅವರ ಕುಟುಂಬಸ್ಥರು ಮದುವೆ ಬಟ್ಟೆ ಧರಿಸಿ ಸಂಭ್ರಮದಿಂದ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಆದರೆ ಅಲ್ಲಿ ಯಾವುದೇ ಮದುವೆ ಮಂಟಪವಾಗಲಿ, ಊಟದ ವ್ಯವಸ್ಥೆಯಾಗಲಿ ಇರಲಿಲ್ಲ. ಸ್ಥಳದಲ್ಲಿದ್ದ ಮುಖೇಶ್ ಬೈರಾಗಿ ಮತ್ತು ಆತನ ಪತ್ನಿ ಸುನಿತಾ, “ಹುಡುಗಿಯರು ಇಂದೋರ್‌ನಿಂದ ಬರುತ್ತಿದ್ದಾರೆ” ಎಂದು ರಾತ್ರಿ 10 ಗಂಟೆಯವರೆಗೂ ಸುಳ್ಳು ನೆಪ ಹೇಳಿ ಸತಾಯಿಸಿದ್ದಾರೆ. ಕೊನೆಗೆ ವಂಚನೆ ತಡವಾಗಿ ಬೆಳಕಿಗೆ ಬಂದಾಗ ವರರು ಮದುವೆ ಮಂಟಪದ ಬದಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಯಿತು.
ಪೊಲೀಸ್ ಕಾರ್ಯಾಚರಣೆ:
ಸಂತ್ರಸ್ತ ಅಭಿಷೇಕ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ದೇವಾಸ್ ಪೊಲೀಸರು, ಪ್ರಮುಖ ಆರೋಪಿಗಳಾದ ಮುಖೇಶ್ ಬೈರಾಗಿ ಮತ್ತು ಆತನ ಪತ್ನಿ ಸುನಿತಾ ಬೈರಾಗಿಯನ್ನು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 318(4) (ವಂಚನೆ) ಅಡಿಯಲ್ಲಿ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಸಹಚರರಾದ ದಿನೇಶ್ ಬೈರಾಗಿ ಮತ್ತು ನರಸಿಂಗ್ ದಾಸ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
- Bharatiya Nyaya Sanhita Section 318
- Dewas fake wedding
- fake brides scam MP
- Indore orphanage marriage fraud
- Madhya Pradesh Crime
- Madhya Pradesh marriage scam
- mass wedding fraud Dewas
- matrimonial scam India
- Mukesh Bairagi arrested
- ಅನಾಥಾಶ್ರಮ ಮದುವೆ ವಂಚನೆ
- ಕ್ರೈಂ ನ್ಯೂಸ್
- ದೇವಾಸ್ ಸಾಮೂಹಿಕ ವಿವಾಹ ಹಗರಣ
- ನಕಲಿ ವಧು ಹಗರಣ
- ಮದುವೆ ವಂಚನೆ ಜಾಲ
- ಮಧ್ಯಪ್ರದೇಶ ಮದುವೆ ವಂಚನೆ
- ಮುಖೇಶ್ ಬೈರಾಗಿ ಬಂಧನ
- ವಧು ವಂಚನೆ





Leave a comment