ದಾವಣಗೆರೆ: ಚಿತ್ರದುರ್ಗದಲ್ಲಿ ಮೇ. 9ಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ರಾಜಕೀಯ ಜೀವನದ ಐದು ದಶಕಗಳ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಸಂಸದ ಬಿ. ವೈ. ರಾಘವೇಂದ್ರ ಮನವಿ ಮಾಡಿದರು.
ನಗರದ ಗುಂಡಿ ಮಹಾದೇವಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೃಹತ್ “ಅಭಿಮಾನೋತ್ಸವ” ಕಾರ್ಯಕ್ರಮದ ಯಶಸ್ಸಿನ ನಿಮಿತ್ತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದವರು ಬಿ. ಎಸ್. ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಕಮಲ ಅರಳುವಂತೆ ಮಾಡಿದ್ದು ಅವರ ದೊಡ್ಡ ಸಾಧನೆ. ಹೋರಾಟ, ರೈತಪರ, ಜನಪರ ಕಾರ್ಯಕ್ರಮಗಳಿಂದ
ರಾಜ್ಯದ ಜನರ ಕಷ್ಟ ಸ್ಪಂದಿಸಿದ್ದಾರೆ. ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ರಾಜ್ಯದ ಬಡವರ ಪರ ಆಡಳಿತ ನಡೆಸಿ ಸೈ ಎನಿಸಿಕೊಂಡವರು ಎಂದು ಹೇಳಿದರು.
ಯಡಿಯೂರಪ್ಪರ ಜೀವನ ನಮಗೆಲ್ಲರಿಗೂ ಆದರ್ಶ ಮತ್ತು ದಾರಿದೀಪ. ಇಂಥ ಹಿರಿಯ ರಾಜಕೀಯ ಮುತ್ಸದ್ದಿ ಯಡಿಯೂರಪ್ಪರ ಹೋರಾಟದ ಬದುಕು ನೆನಪು ಮಾಡಿಕೊಳ್ಳುವ ಅಭೂತಪೂರ್ವ ಕಾರ್ಯಕ್ರಮ ಇದಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಸೇರಿದಂತೆ ಲಕ್ಷಾಂತರ ಜನರು ಬರಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಜಕಾರಣದಲ್ಲಿ ಐದು ದಶಕ ಪೂರೈಸುವುದು ಸುಲಭದ ಮಾತಲ್ಲ. ಶಾಸಕರಾಗಿ, ಡಿಸಿಎಂ ಆಗಿ, ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಯಡಿಯೂರಪ್ಪ ಅವರಿಗೆ
ಬೇರೆ ಯಾರೂ ಸಾಟಿ ಇಲ್ಲ. ರಾಜ್ಯದಲ್ಲಿ ಬಿಜೆಪಿ ಇಲ್ಲದ ವೇಳೆಯಲ್ಲಿ ಚುಕ್ಕಾಣಿ ಹಿಡಿದು ಸೈಕಲ್ ನಲ್ಲಿ ಓಡಾಡಿ ಪಕ್ಷ ಸಂಘಟಿಸಿದವರು. ಅನಂತ ಕುಮಾರ್, ಶಿವಪ್ಪ ಸೇರಿದಂತೆ ಘಟಾನುಘಟಿ ನಾಯಕರ ಜೊತೆಗೆ ಸೇರಿಕೊಂಡು ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ರಾಘವೇಂದ್ರ ಹೇಳಿದರು.
ಜನಸಾಮಾನ್ಯರ ಮತ್ತು ರೈತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಯಡಿಯೂರಪ್ಪನವರ ಅಭಿಮಾನಿಗಳು ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕುರಿತು ಮತ್ತು ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಈ ಸಂದರ್ಭದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ತಿಳಿಸಿದರು.
ಚಿತ್ರದುರ್ಗದ ಈ ಅಭಿಮಾನೋತ್ಸವವು ಕೇವಲ ಒಂದು ಸಮಾರಂಭವಲ್ಲ, ಇದು ನಮ್ಮ ನಾಯಕರಿಗೆ ಸಲ್ಲಿಸುವ ಗೌರವದ ಪ್ರತೀಕವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರು ಮತ್ತು ಅಭಿಮಾನಿಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸುವ ಮೂಲಕ ಈ ಸಮಾವೇಶವನ್ನು ಐತಿಹಾಸಿಕವಾಗಿಸಲು ನಿರ್ಧರಿಸಲಾಯಿತು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕ ಬಿ. ಪಿ. ಹರೀಶ್, ಮಾಜಿ ಶಾಸಕರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಬಿ. ಸಿ. ಪಾಟೀಲ್, ಎಸ್. ವಿ. ರಾಮಚಂದ್ರಪ್ಪ, ಬಿಜೆಪಿ ನಾಯಕಿ ಗಾಯಿತ್ರಿ ಸಿದ್ದೇಶ್ವರ, ಯುವ ಮುಖಂಡರಾದ ಜಿ. ಎಸ್. ಅನಿತ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ಶಿವಯೋಗಿಸ್ವಾಮಿ, ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮತ್ತಿತರರು ಹಾಜರಿದ್ದರು.





Leave a comment