ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರ ಪರವಾಗಿ ನಗರದ ಬಾಷಾ ನಗರದಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ಬೃಹತ್ ಬಹಿರಂಗ ಪ್ರಚಾರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಭೆ ಸದಸ್ಯ ಡಾ. ನಸೀರ್ ಹುಸೇನ್, ರಾಜ್ಯ ಸರ್ಕಾರದ ಮುಖ್ಯ ಸಚೇತಕರು ಹಾಗೂ ಎಂಎಲ್‌ಸಿ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಷದ್, ಎಂಎಲ್‌ಸಿ ಬಲ್ಕೀಶ್ ಬಾನು, ಶಾಸಕ ಯಾಸೀರ್ ಪಠಾಣ್, ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಪಾಲ್ಗೊಂಡು ಮತಯಾಚನೆ ಮಾಡಿದರು.
ಉಪಚುನಾವಣೆಯ ಹಿನ್ನೆಲೆಯಲ್ಲಿ ಮನೆ ಮನೆ ಪ್ರಚಾರದ ಜೊತೆಗೆ ಇಂತಹ ಪ್ರಮುಖ ಏರಿಯಾಗಳಲ್ಲಿ ಬೃಹತ್ ಸಭೆಗಳನ್ನು ನಡೆಸುವ ಮೂಲಕ ಮತದಾರರ ವಿಶ್ವಾಸ ಗೆಲ್ಲಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಸಭೆಯಲ್ಲಿ ನೂರಾರು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ವಿಶೇಷವಾಗಿ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯಲು ಬಾಷಾ ನಗರದಲ್ಲಿ ನಡೆದ ಈ ಸಭೆಯು ಕಾಂಗ್ರೆಸ್ ಪಾಳಯದಲ್ಲಿ ಹೊಸ ಉತ್ಸಾಹ ತುಂಬಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ನಾಸೀರ್ ಹುಸೇನ್ ಅವರು, “ದಾವಣಗೆರೆಯ ಸರ್ವತೋಮುಖ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಕೊಡುಗೆ ಅಪಾರ. ಈ ಪರಂಪರೆಯನ್ನು ಮುಂದುವರಿಸಲು ಮತ್ತು ಕ್ಷೇತ್ರದ ಪ್ರಗತಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು,” ಎಂದು ಮನವಿ ಮಾಡಿದರು.
ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಮಾತನಾಡಿ, ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸೋಣ. ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿ ಕುತಂತ್ರಕ್ಕೆ ಬಲಿಯಾಗಬೇಡಿ. ಮುಸ್ಲಿಂ ಸಮುದಾಯದ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಮತ್ತೊಮ್ಮೆ ಈ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸೋಣ
ಎಂದು ಕರೆ ನೀಡಿದರು.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಜೊತೆ ಸಮರ್ಥ್ ಶಾಮನೂರು ಶಾಸಕರಾದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮತ್ತಷ್ಟು ಜಾಸ್ತಿಯಾಗುತ್ತದೆ. ಶಾಮನೂರು ಶಿವಶಂಕರಪ್ಪರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದಂತೆ ಸಮರ್ಥ್ ಶಾಮನೂರು ಮಾಡುತ್ತಾರೆ ಎಂಬ ವಿಶ್ವಾಸ ಇದೆ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಸಮರ್ಥ್ ಶಾಮನೂರು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬೋಣ ಎಂದು ಹೇಳಿದರು.
ಸಭೆಯಲ್ಲಿ ಬಾಷಾ ನಗರದ ಮುಸ್ಲಿಂ ಮುಖಂಡರು, ಯುವ ನಾಯಕರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
- Basha Nagar
- Congress Campaign Rally
- Davanagere Politics
- Davanagere South By-election
- Dr. Naseer Hussain
- Minority Voters.
- Saleem Ahmed
- Samarth Shamanur
- Shamanur Shivashankarappa
- Syed Khalid Ahmed
- ಅಲ್ಪಸಂಖ್ಯಾತ ಮತದಾರರು
- ಕಾಂಗ್ರೆಸ್ ಪ್ರಚಾರ ಸಭೆ
- ಡಾ. ನಸೀರ್ ಹುಸೇನ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ಬಾಷಾ ನಗರ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು
- ಸಲೀಂ ಅಹಮದ್
- ಸೈಯದ್ ಖಾಲಿದ್ ಅಹ್ಮದ್






Leave a comment