Home ದಾವಣಗೆರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪರ ಅಭಿವೃದ್ಧಿಗೆ ಜನಮನ್ನಣೆ, ಸಮರ್ಥ್ ಗೆಲುವು ನಿಶ್ಚಿತ: ಎನ್. ಚಲುವರಾಯ ಸ್ವಾಮಿ ವಿಶ್ವಾಸ
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪರ ಅಭಿವೃದ್ಧಿಗೆ ಜನಮನ್ನಣೆ, ಸಮರ್ಥ್ ಗೆಲುವು ನಿಶ್ಚಿತ: ಎನ್. ಚಲುವರಾಯ ಸ್ವಾಮಿ ವಿಶ್ವಾಸ

Share
ದಾವಣಗೆರೆ
Share

ದಾವಣಗೆರೆ: ಈ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗ್ಯಾರಂಟಿ ಸರ್ಕಾರಕ್ಕೆ ಗೆಲುವು ಸಹ ಗ್ಯಾರಂಟಿ. ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿಗೆ ಜನಮನ್ನಣೆ ಸಿಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಶಾಮನೂರು ಶಿವಶಂಕರಪ್ಪ ಅವರ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಎಲ್ಲಾ ಸಮುದಾಯದವರಿಗೂ ಸೌಲಭ್ಯ ಕಲ್ಪಿಸಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಸಮರ್ಥ ಶಾಮನೂರು ಮಲ್ಲಿಕಾರ್ಜುನ ಅವರ ‘ಕೈʼ ಹಿಡಿಯಲಿದೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಟೀಕಿಸಿದ್ದರು. ಗ್ಯಾರಂಟಿ ಜಾರಿಗೆ ತರಲು ಅಸಾಧ್ಯ, ರಾಜ್ಯ ದಿವಾಳಿ ಆಗುತ್ತದೆ. ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ ಎಂದರು. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೂ 1.30 ಲಕ್ಷ ಕೋಟಿ ರೂ. ಹಣ ಖರ್ಚು ಮಾಡಿದೆ. ದಾವಣಗೆರೆ ಜಿಲ್ಲೆಗೆ 3523 ಕೋಟಿ ಹಣ ವೆಚ್ಚ ಮಾಡಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೊಂದಕ್ಕೆ ಕಳೆದ ಮೂರು ವರ್ಷಗಳಲ್ಲಿ 538 ಕೋಟಿ ರೂ. ಹಣ ನೀಡಿದೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ವಿವೇಚನೆಯಡಿ 80 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ವಿಪಕ್ಷ, ಆಡಳಿತದ ಶಾಸಕರಿಗೂ ಅನುದಾನ ಹಂಚಿಕೆ ಮಾಡಲಾಗಿದ್ದು ಈ ವರ್ಷ ಪ್ರತಿ ಶಾಸಕರಿಗೂ 25 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ವಿವರಿಸಿದರು.

ರಾಜ್ಯದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಹಣ ಪಡೆಯುತ್ತಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡುತ್ತಿರುವುದು ಕೇವಲ 50 ಸಾವಿರ ಕೋಟಿ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯದ ಹಿತಾಸಕ್ತಿ ಬಗ್ಗೆ ಬಾಯಿಬಿಡುತ್ತಿಲ್ಲ. ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರು ಕೇಂದ್ರ ಸರ್ಕಾರ ಒಪ್ಪಿಗೆ ಕೊಡುತ್ತಿಲ್ಲ. ಈ ಬಗ್ಗೆ ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಮಾತನಾಡುವುದಿಲ್ಲ ಎಂದರು.

ಈ ಉಪಚುನಾವಣೆ ಫಲಿತಾಂಶ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಈ ಉಪಚುನಾವಣೆ ಗೆಲುವು ಮುಂದಿನ ಚುನಾವಣೆ ದಿಕ್ಸೂಚಿ ಎಂಬುದು ಅವರ ವೈಯಕ್ತಿಕ ಅಭಿಪ್ರಾಯ, ರಾಜಕೀಯ ವಿಶ್ಲೇಷಣೆ. ಈ ಹಿಂದೆ ನಡೆದ ಬಳ್ಳಾರಿ, ಚನ್ನಪಟ್ಟಣ, ಹಾವೇರಿ ಉಪಚುನಾವಣೆಯಲ್ಲಿ ಮೂರರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಚನ್ನಪಟ್ಟಣ ಮತ್ತು ಹಾವೇರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಅವರ ಪುತ್ರರನ್ನೇ ಸೋಲಿಸಿ ಕಾಂಗ್ರೆಸ್ ಗೆಲುವು ಸಾದಿಸಿತ್ತು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *