ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿತ್ತು. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣ ನಾನೊಂದು ತೀರ.. ನೀನೊಂದು ತೀರದಂತಿತ್ತು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸಂಧಾನಕ್ಕೆ ಎರಡೂ ಬಣಗಳು ಶರಣಾಗಿವೆ.
ದಾವಣಗೆರೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸಿದ ವಿಜಯೇಂದ್ರ ಅವರು ಎರಡೂ ಬಣಗಳ ನಾಯಕರನ್ನು ಒಟ್ಟಿಗೆ ಕೂರಿಸಿ ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪರ ಗೆಲುವಿಗೆ ಹಗಲಿರುಳು ಒಗ್ಗಟ್ಟನಿಂದ ದುಡಿಯುವ ಸಂದೇಶ ಸಾರಿದ್ದಾರೆ.
ಒಗ್ಗಟ್ಟಿನ ಮಂತ್ರ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ನಾಯಕರು ಒಂದಾದರು. ಸಿದ್ದೇಶ್ವರ ಮತ್ತು ರೇಣುಕಾಚಾರ್ಯ ಅವರು ವೇದಿಕೆಯ ಮೇಲೆ ಪರಸ್ಪರ ಕೈ ಎತ್ತುವ ಮೂಲಕ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ರವಾನಿಸಿದರು.
ಉಪಚುನಾವಣೆಗೆ ರಣತಂತ್ರ:
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು. ಇದೇ ವೇಳೆ ನೇಕಾರರ ಪ್ರಕೋಷ್ಠದ ಪ್ರಮುಖ ಸಭೆಯೂ ನಡೆದಿದ್ದು, ಸಮುದಾಯದ ಮುಖಂಡರು ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಪ್ರಮುಖ ನಾಯಕರ ಉಪಸ್ಥಿತಿ:
ಸಭೆಯಲ್ಲಿ ಮಾಜಿ ಸಚಿವರಾದ ಎಚ್.ಎಸ್. ಶಿವಶಂಕರ್, ಎ.ಎಚ್. ಶಿವಯೋಗಿ ಸ್ವಾಮಿ, ಅಜಯ್ ಕುಮಾರ್ ಹಾಗೂ ಯಶವಂತರಾವ್ ಜಾದವ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ದಾವಣಗೆರೆ ಜಿಲ್ಲಾ ನೇಕಾರರ ಪ್ರಕೋಷ್ಠದಿಂದ ಇಂದು ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಂಸದರಾದ ಜಿ.ಎಂ ಸಿದ್ದೇಶ್ವರ , ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಎಚ್. ಎಸ್. ಶಿವಶಂಕರ್, ಎ. ಎಚ್. ಶಿವಯೋಗಿ ಸ್ವಾಮಿ, ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾದ ಅಜಯ್ ಕುಮಾರ್, ಯಶವಂತರಾವ್ ಜಾದವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಭೆಯಲ್ಲಿ ಎಲ್ಲರೂ ಎದ್ದು ನಿಂತು ಕೈ ಮೇಲಕ್ಕೆತ್ತುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದರು.
ಈ ವೇಳೆ ನೇಕಾರರ ಪ್ರಕೋಷ್ಠದ ಸದಸ್ಯರು ತಪ್ಪದೇ ಬಿಜೆಪಿಗೆ ಮತ ಹಾಕುವುದಾಗಿ ಭರವಸೆ ನೀಡಿದರು.





Leave a comment