ದಾವಣಗೆರೆ: ವಸತಿ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರ ಬಗ್ಗೆ ಏಕ ವಚನ ಮತ್ತು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಮಾಜದ ನಾಯಕರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಹಿಂದ ಮತ್ತು ಮುಸ್ಲಿಂ ಸಮಾಜ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮುಸ್ಲಿಂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ವಕ್ಫ್ ಸಮಿತಿ ಸದಸ್ಯ ಘನಿ ತಾಹೀರ್ ಮತ್ತು ಮುಸ್ಲಿಂ ಸಮಾಜದ ಮುಖಂಡ ಎಸ್. ಕೆ. ಇಜಾಜ್ ಅಹ್ಮದ್ ಅವರು, ಶಾಮನೂರು ಶಿವಶಂಕರಪ್ಪನವರು ನಿಧನದ ನಂತರ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ನಾಯಕರಿಗೆ ಅದರಲ್ಲೂ ಮುಸ್ಲಿಂ ಸಮಾಜಕ್ಕೆ ಈ ಬಾರಿ ಟಿಕೇಟ್ ನೀಡುವಂತೆ ಜಮೀರ್ ಅಹ್ಮದ್ ಖಾನ್ ಅವರು ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಒತ್ತಾಯಿಸಿದ್ದರು. ಇದಕ್ಕೆಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ರವರು ಜಮೀರ್ ಆಹ್ಮದ್ಖಾನ್ರವರನ್ನು ಏಕ ವಚನದಲ್ಲಿ ನಿಂದಿಸಿರುವುದು ರಾಜ್ಯದ ಎಲ್ಲಾ ಮುಸ್ಲಿಂ ಬಾಂಧವರ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಹೇಳಿದರು.
ಜಮೀರ್ ಆಹ್ಮದ್ ಖಾನ್ರವರು ಕಾಂಗ್ರೆಸ್ ಪಕ್ಷಕ್ಕೆ ಸ್ಟಾರ್ ಕ್ಯಾಂಪೇನಿಯರ್. ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಪಕ್ಷದ ಹಲವಾರು ಅಹಿಂದ ಮತ್ತು ಮುಸ್ಲಿಂ ಸಮಾಜದ ಸಂಘಟನಾ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಜಮೀರ್ ಅಹ್ಮದ್ ದಾವಣಗೆರೆ ದಕ್ಷಿಣಕ್ಕೆ ಮಾತ್ರ ಸೀಮಿತವಾಗಿರುವವರಲ್ಲ. ಅವರು ಕರ್ನಾಟಕ 224 ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಎಐಸಿ.ಸಿ. ನಿರ್ದೇಶನದಂತೆ ಕೆಪಿಸಿಸಿ ರಚಿಸಿರುವ ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರೂ ಆಗಿದ್ದಾರೆ. ಆದರೆ ಇಂಥ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.
ವಿವಾದದ ಹಿನ್ನೆಲೆ
ಏಕವಚನ ಪ್ರಯೋಗ: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಬಗ್ಗೆ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏಕವಚನದಲ್ಲಿ ಮಾತನಾಡಿದ್ದಾರೆ ಮತ್ತು ಅಬ್ದುಲ್ ಜಬ್ಬಾರ್ ಅವರ ಬಗ್ಗೆ ಹಗುರವಾಗಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಮುಖಂಡರ ಆಕ್ರೋಶಕ್ಕೆ ಕಾರಣ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ: ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ತೆರವಾದ ಈ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಜಮೀರ್ ಅಹ್ಮದ್ ಖಾನ್ ಹೈಕಮಾಂಡ್ ಮಟ್ಟದಲ್ಲಿ ಒತ್ತಾಯಿಸಿದ್ದರು. ಈ ಬೆಳವಣಿಗೆಯೇ ಸಚಿವರ ನಡುವಿನ ಅಸಮಾಧಾನಕ್ಕೆ ಮೂಲ ಎನ್ನಲಾಗಿದೆ.
ಮುಖಂಡರ ಎಚ್ಚರಿಕೆ
ರಾಜ್ಯ ವಕ್ಫ್ ಸಮಿತಿ ಸದಸ್ಯ ಘನಿ ತಾಹೀರ್ ಮತ್ತು ಮುಖಂಡ ಎಸ್. ಕೆ. ಇಜಾಜ್ ಅಹ್ಮದ್ ಅವರು ಈ ಕೆಳಗಿನ ಎಚ್ಚರಿಕೆಗಳನ್ನು ನೀಡಿದ್ದಾರೆ:
ಕ್ಷಮೆಯಾಚನೆಗೆ ಆಗ್ರಹ: ಸಚಿವ ಮಲ್ಲಿಕಾರ್ಜುನ್ ಅವರು ಕೂಡಲೇ ಮುಸ್ಲಿಂ ಸಮಾಜದ ನಾಯಕರ ಕ್ಷಮೆಯಾಚಿಸಬೇಕು.
ರಾಜಕೀಯ ಪರಿಣಾಮ: ಒಂದು ವೇಳೆ ಕ್ಷಮೆಯಾಚಿಸದಿದ್ದರೆ, ಮುಂಬರುವ ದಿನಗಳಲ್ಲಿ ಅಹಿಂದ ಮತ್ತು ಮುಸ್ಲಿಂ ಸಮಾಜ ಒಟ್ಟಾಗಿ ಜಿಲ್ಲೆಯಲ್ಲಿ ಸೂಕ್ತ ರಾಜಕೀಯ ನಿರ್ಧಾರ ತೆಗೆದುಕೊಳ್ಳಲಿದೆ.
ನಾಯಕತ್ವದ ಗೌರವ: ಜಮೀರ್ ಅಹ್ಮದ್ ಅವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತರಲ್ಲ, ಅವರು ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷಕ್ಕಾಗಿ ದುಡಿದ ಸ್ಟಾರ್ ಕ್ಯಾಂಪೇನಿಯರ್. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಇಡೀ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಅಬ್ದುಲ್ ಜಬ್ಬಾರ್ ಅವರ ಬಗ್ಗೆ ಎಸ್.ಎಸ್.ಮಲ್ಲಿಕಾರ್ಜುನ್ರವರ ಆಡಿರುವ ಮಾತು, ನಡೆದುಕೊಂಡಿರುವ ನಡವಳಿಕೆಯಿಂದ ದಾವಣಗೆರೆ ಜಿಲ್ಲಾ, ರಾಜ್ಯದ ಅಹಿಂದ ಮತ್ತು ಮುಸ್ಲಿಂ ಸಮಾಜದ ಮುಖಂಡರಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಈ ಕೂಡಲೇ ಸಚಿವರು ಸಮಾಜದ ನಾಯಕರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರಲ್ಲದೇ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಹಿಂದ ಮತ್ತು ಮುಸ್ಲಿಂ ಸಮಾಜ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಶಹ ನವಾಜ್ ಖಾನ್, ಪಿ. ಖಾಸೀಂ ಸಾಬ್, ಸೈಯದ್ ರಿಯಾಜ್, ಅಬ್ದುಲ್ ಜಬ್ಬಾರ್, ನೂರ್ ಅಹ್ಮದ್ ಮತ್ತಿತರರು ಹಾಜರಿದ್ದರು.
- Abdul Jabbar
- AHINDA
- Congress Internal Rift
- Davanagere South Byelection
- Ghani Tahir
- Karnataka Politics
- Muslim Leaders Warning
- S. S. MALLIKARJUN
- S.K. Ejaz Ahmed
- Zameer Ahmed Khan
- ಅಬ್ದುಲ್ ಜಬ್ಬಾರ್
- ಅಹಿಂದ ಸಂಘಟನೆ
- ಎಸ್. ಎಸ್. ಮಲ್ಲಿಕಾರ್ಜುನ್
- ಎಸ್.ಕೆ. ಇಜಾಜ್ ಅಹ್ಮದ್
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಆಂತರಿಕ ಭಿನ್ನಮತ
- ಘನಿ ತಾಹೀರ್
- ಜಮೀರ್ ಅಹ್ಮದ್ ಖಾನ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಮುಸ್ಲಿಂ ಮುಖಂಡರ ಎಚ್ಚರಿಕೆ





Leave a comment