ದಾವಣಗೆರೆ: ದಾವಣಗೆರೆ ಬಿಜೆಪಿಯಲ್ಲಿ ಗೊಂದಲಗಳು ಇರುವುದು ನಿಜ. ಇದನ್ನು ಒಪ್ಪಿಕೊಳ್ಳುತ್ತೇನೆ. ಏನೇ ವ್ಯತ್ಯಾಸಗಳು, ಸಮಸ್ಯೆಗಳು ಇದ್ದರೂ ಸರಿಪಡಿಸುವ ಶಕ್ತಿ ನಮ್ಮೆಲ್ಲರಿಗೂ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಬಿಜೆಪಿಯಲ್ಲಿನ ಬಂಡಾಯ ಕುರಿತಂತೆ ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ನಾನು ದಾವಣಗೆರೆಗೆ ಬಂದಿದ್ದೇನೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಬಂದಿದ್ದಾರೆ. ಎಲ್ಲರೂ ಕುಳಿತು ಚರ್ಚಿಸಿ ಸಮಸ್ಯೆಗಳನ್ನು ಖಂಡಿತ ಬಗೆಹರಿಸುತ್ತೇವೆ. ಭಿನ್ನಮತ ಮುಂದುವರಿಯಲು ಬಿಡುವುದಿಲ್ಲ ಎಂದು ಘೋಷಿಸಿದರು.
ವಿಜಯೇಂದ್ರ ಅವರ ಭೇಟಿಯ ಉದ್ದೇಶ:
“ಸಮಸ್ಯೆಗಳನ್ನು ಸರಿಪಡಿಸುವ ಶಕ್ತಿ ನಮ್ಮೆಲ್ಲರಿಗೂ ಇದೆ. ಜಿಎಂಐಟಿಗೂ ಭೇಟಿ ನೀಡಿ ಭಿನ್ನರ ಸಮಸ್ಯೆ ಆಲಿಸಿದ್ದೇನೆ. ಎಲ್ಲವನ್ನೂ ಸರಿಪಡಿಸಿ ಪಕ್ಷವನ್ನು ಒಗ್ಗಟ್ಟಿನಿಂದ ಚುನಾವಣೆಗೆ ಸಜ್ಜುಗೊಳಿಸುವುದೇ ನನ್ನ ದಾವಣಗೆರೆ ಭೇಟಿಯ ಮುಖ್ಯ ಉದ್ದೇಶ”
ಬಿ. ವೈ. ವಿಜಯೇಂದ್ರ
ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಆಕಾಂಕ್ಷಿಗಳ ವಿಚಾರ ತಿಳಿದುಕೊಂಡಿದ್ದೇನೆ. ಇಲ್ಲಿಗೆ ಬಂದಿರುವ ಉದ್ದೇಶವೂ ಇದೆ. ಸಣ್ಣಪುಟ್ಟ ಸಮಸ್ಯೆಗಳು ಇದ್ದು, ಸರಿಪಡಿಸಲಾಗುತ್ತದೆ. ಉಪಚುನಾವಣೆಗೆ ಎಂಟರಿಂದ ಹತ್ತು ಮಂದಿ ಆಕಾಂಕ್ಷಿಗಳಿದ್ದಾರೆ. ಕೆಲವರ ಜೊತೆ ಚರ್ಚೆ ನಡೆಸಿದ್ದೇನೆ. ಜಿಎಂಐಟಿಗೂ ಭೇಟಿ ನೀಡಿ ಭಿನ್ನರ ಸಮಸ್ಯೆ ಆಲಿಸಿದ್ದೇನೆ. ಎಲ್ಲದಕ್ಕೂ ಸೂಕ್ತ ಪರಿಹಾರ ಇರುತ್ತದೆ. ಹಾಗಾಗಿ, ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ವಿಶ್ವಾಸ ನನ್ನದು ಎಂದು ಹೇಳಿದರು.
ದಾವಮಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಂಘಟನೆ ಕೆಲಸ ಬಿರುಸಿನಿಂದ ಸಾಗುತ್ತಿದೆ. ದಾವಣಗೆರೆ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ 150 ಕಾರ್ಯಕರ್ತರು ವಿಸ್ತಾರಕ್ ಯೋಜನೆಯಡಿ ಮನೆ ಮನೆ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಬಿಜೆಪಿ ಸಾಧನೆಗಳ ಕುರಿತಂತೆ ಜನರು ಮತ್ತು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಮುಗಿದಿದೆ. ಕಳೆದೊಂದು ವಾರದಿಂದ ಇಲ್ಲೇ ಉಳಿದಿರುವ ಕಾರ್ಯಕರ್ತರು ಸಂಘಟನಾತ್ಮಾಕ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದೇವೆ. ಕಾರ್ಯಕರ್ತರಲ್ಲಿ ರಣೋತ್ಸವ ಇದೆ. ಮುಖಂಡರಲ್ಲಿ ಸ್ವಲ್ಪ ಗೊಂದಲ ಇರುವುದು ನಿಜ. ಈ ಸತ್ಯ ಒಪ್ಪಿಕೊಳ್ಳುತ್ತೇನೆ. ಅಧ್ಯಕ್ಷನಾಗಿ ಜವಾಬ್ದಾರಿ ಇದೆ. ಸರಿಪಡಿಸುವ
ನಿಟ್ಟಿನಲ್ಲಿ ಬಂದಿದ್ದು, ಫಲ ಸಿಗುತ್ತದೆ ಎಂಬುದು ಮಾಧ್ಯಮದವರಿಗೆ ಗೊತ್ತಾಗಬೇಕಿಲ್ಲ. ನಮಗೆ ಅರಿವಾದರೆ ಸಾಕು. ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.





Leave a comment