Home ದಾವಣಗೆರೆ ಬಿ. ಎಸ್. ಯಡಿಯೂರಪ್ಪ ಘೋಷಣೆ ತಂದ ಬಿಕ್ಕಟ್ಟು: ಅತೃಪ್ತ ಮುಖಂಡರ ರೋಷ, ಜಿಎಂಐಟಿಯಲ್ಲಿ ಮಾರ್ಚ್ 5ಕ್ಕೆ ಹೈವೋಲ್ಟೇಜ್ ಮೀಟಿಂಗ್!
ದಾವಣಗೆರೆನವದೆಹಲಿಬೆಂಗಳೂರು

ಬಿ. ಎಸ್. ಯಡಿಯೂರಪ್ಪ ಘೋಷಣೆ ತಂದ ಬಿಕ್ಕಟ್ಟು: ಅತೃಪ್ತ ಮುಖಂಡರ ರೋಷ, ಜಿಎಂಐಟಿಯಲ್ಲಿ ಮಾರ್ಚ್ 5ಕ್ಕೆ ಹೈವೋಲ್ಟೇಜ್ ಮೀಟಿಂಗ್!

Share
ಬಿ. ಎಸ್. ಯಡಿಯೂರಪ್ಪ
Share

ದಾವಣಗೆರೆ:ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಹೊನ್ನಾಳಿ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಘೋಷಣೆ ಮಾಡಲಾಗಿರುವ ಅಭ್ಯರ್ಥಿಗಳ ಹೆಸರನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಬಿಜೆಪಿ ಅಸಮಾಧಾನಿತ ಮುಖಂಡರು, ಈ ಕುರಿತು ಚರ್ಚಿಸಲು ಮಾರ್ಚ್ 5ರ ಗುರುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ಜಿಎಂಐಟಿ ವಸತಿ ಗೃಹದಲ್ಲಿ ಬೃಹತ್ ಸಭೆಯನ್ನು ಹಮ್ಮಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೊನ್ನಾಳಿ ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಅವರು,  ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಮಂಡಲದಿಂದ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಲಿದ್ದಾರೆ. “ನಾವೆಲ್ಲರೂ ಒಟ್ಟಾಗಿ ಹಿರಿಯ ನಾಯಕರಾದ ಜಿ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ. ಹರೀಶ್ ಅವರ ನೇತೃತ್ವದಲ್ಲಿ ಚರ್ಚೆ ನಡೆಸಲಿದ್ದೇವೆ. ಒಂದು ವೇಳೆ ಜಿಲ್ಲಾ ಮಟ್ಟದಲ್ಲಿ ನಮಗೆ ನ್ಯಾಯ ಸಿಗದಿದ್ದರೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಭೇಟಿ ಮಾಡಿ ಹೋರಾಟ ನಡೆಸಲು ಸಿದ್ಧರಿದ್ದೇವೆ.” ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಜನತಾ ಪಾರ್ಟಿಯು ಶಿಸ್ತಿನ ಮತ್ತು ರಾಷ್ಟ್ರೀಯ ಸಿದ್ಧಾಂತವುಳ್ಳ ಪಕ್ಷವಾಗಿದ್ದು, ಇಲ್ಲಿ ಅಭ್ಯರ್ಥಿಗಳ ಆಯ್ಕೆಗೆ ತನ್ನದೇ ಆದ ಸಂಸದೀಯ ಮಂಡಳಿಯ ವ್ಯವಸ್ಥೆಯಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರು ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಈಗಲೇ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮಾಡುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕಪಕ್ಷೀಯ ನಿರ್ಧಾರ: ಚುನಾವಣೆಗೂ ಎರಡು ವರ್ಷ ಮೊದಲೇ ಅಭ್ಯರ್ಥಿಗಳನ್ನು ಘೋಷಿಸುವುದು ಪ್ರಾದೇಶಿಕ ಪಕ್ಷಗಳ ಸಂಸ್ಕೃತಿಯೇ ಹೊರತು ರಾಷ್ಟ್ರೀಯ ಪಕ್ಷವಾದ ಬಿಜೆಪಿಯದ್ದಲ್ಲ. ಹೊನ್ನಾಳಿಯಿಂದ ಶಾಂತರಾಜ್ ಪಾಟೀಲ್, ಜಗಳೂರಿನಿಂದ ಹೆಚ್.ಪಿ. ರಾಜೇಶ್, ಚನ್ನಗಿರಿಯಿಂದ ಹೆಚ್.ಎಸ್. ಶಿವಕುಮಾರ್, ಮಾಯಕೊಂಡದಿಂದ ಶ್ಯಾಮ್, ಹರಪ್ಪನಹಳ್ಳಿಯಿಂದ ನಂಜೇಗೌಡ್ರು ಸೇರಿದಂತೆ ಅನೇಕ ನಿಷ್ಠಾವಂತರು ಆಕಾಂಕ್ಷಿಗಳಾಗಿದ್ದಾರೆ. ಹೀಗಿದ್ದರೂ ಹೋದಲ್ಲೆಲ್ಲಾ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದು ಹಿರಿಯ ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದಾರೆ.

ಪಕ್ಷದಲ್ಲಿನ ಒಡಕು:

ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ‘ಮನೆಯೊಂದು ಮೂರು ಬಾಗಿಲು’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ತರಗನಹಳ್ಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲೆಯ ಪ್ರಮುಖ ನಾಯಕರಾದ ಜಿ.ಎಂ. ಸಿದ್ದೇಶ್ವರ್, ಶಾಸಕ
ಬಿ.ಪಿ. ಹರೀಶ್ ಸೇರಿದಂತೆ ಅನೇಕ ಹಿರಿಯ ಮುಖಂಡರು ಗೈರಾಗಿರುವುದು ಪಕ್ಷದ ಆಂತರಿಕ ಬಿಕ್ಕಟ್ಟಾಗಿದ್ದರೂ, ಆಹ್ವಾನಿಸದಿರುವುದು ಖಂಡನೀಯ ಎಂದು ತಿಳಿಸಿದರು.

ಅನಗತ್ಯ ಹೇಳಿಕೆಗಳು:

ರೇಣುಕಾಚಾರ್ಯರಂತಹ ನಾಯಕರು ಬಿ.ವೈ. ವಿಜೇಂದ್ರ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿರುವುದು ಪಕ್ಷದ ಶಿಸ್ತನ್ನು ಗಾಳಿಗೆ ತೂರಿದಂತಿದೆ. ಇದು ಗುಂಪುಗಾರಿಕೆಗೆ ಪ್ರಚೋದನೆ ನೀಡುತ್ತಿದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ದೊಡ್ಡ ಮಟ್ಟದ ಬಿಕ್ಕಟ್ಟು ಸೃಷ್ಟಿಯಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ಏಕಪಕ್ಷೀಯ ನಿರ್ಧಾರದ ವಿರುದ್ಧ ಸೆಟೆದು ನಿಂತಿರುವ ಜಿಲ್ಲೆಯ ಹಿರಿಯ ಮುಖಂಡರು, ಮಾರ್ಚ್ 5ರಂದು ಜಿಎಂಐಟಿಯಲ್ಲಿ ಬೃಹತ್ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಪಕ್ಷದ ಶಿಸ್ತು ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಅತೃಪ್ತ ನಾಯಕರು ಸಜ್ಜಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *