Home ಕ್ರೈಂ ನ್ಯೂಸ್ ಸಾಲಬಾಧೆಗೆ ಬೆಂಡಾದ ಅನ್ನದಾತ: ನ್ಯಾಮತಿ ತಾಲೂಕಿನ ದೊಡ್ಡೇರಿಯಲ್ಲಿ ರೈತ ಆತ್ಮಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಸಾಲಬಾಧೆಗೆ ಬೆಂಡಾದ ಅನ್ನದಾತ: ನ್ಯಾಮತಿ ತಾಲೂಕಿನ ದೊಡ್ಡೇರಿಯಲ್ಲಿ ರೈತ ಆತ್ಮಹತ್ಯೆ!

Share
ನ್ಯಾಮತಿ
Share

ದಾವಣಗೆರೆ: ಕೃಷಿ ಚಟುವಟಿಕೆಗಾಗಿ ಮಾಡಿದ ಸಾಲ ತೀರಿಸಲಾಗದೆ ಹಾಗೂ ಕಳೆದ ಐದು ವರ್ಷಗಳಿಂದ ನಿರೀಕ್ಷಿತ ಫಸಲು ಬಾರದೆ ಮನನೊಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ:

ದೊಡ್ಡೇರಿ ಗ್ರಾಮದ ನಿವಾಸಿ ಸಿದ್ದು (ಎಸ್. ಉಜ್ಜಯನಿಮಠ) (41) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಡುಮನೆಯ ತೊಲೆಗೆ ನೇಣು ಬಿಗಿದುಕೊಂಡು ಪ್ರಾಣತ್ಯಾಗ ಮಾಡಿದ್ದಾರೆ. ಸಂಬಂಧಿಕರೊಬ್ಬರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಅವರನ್ನು ನ್ಯಾಮತಿ
ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಸಾಲದ ಹೊರೆ:

ಮೃತ ರೈತ ಸಿದ್ದು ಅವರು ತಮ್ಮ ಎರಡು ಎಕರೆ ಮೂವತ್ತು ಗುಂಟೆ ಅಡಿಕೆ ತೋಟದ ಅಭಿವೃದ್ಧಿ ಹಾಗೂ ಇತರ ಕೃಷಿ ಚಟುವಟಿಕೆಗಳಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸ್ಥಳೀಯ ಬ್ಯಾಂಕ್‌ಗಳಲ್ಲಿ ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ. ಬೆಳೆ ಸಾಲ ಹಾಗೂ ಒಡವೆ ಸಾಲಗಳನ್ನು ಪಡೆದಿದ್ದರೂ, ಕಳೆದ ಐದು ವರ್ಷಗಳಿಂದ ಸತತವಾಗಿ ಫಸಲು ಕೈಕೊಟ್ಟಿದ್ದರಿಂದ ಸಾಲ ತೀರಿಸಲು ದಾರಿ ಕಾಣದೆ ಅವರು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲು:

ಈ ಕುರಿತು ಮೃತ ರೈತನ ಪತ್ನಿ ರಂಜಿತಾ ಅವರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *