SUDDIKSHANA KANNADA NEWS/ DAVANAGERE/ DATE:20-09-2024
ದಾವಣಗೆರೆ: ಶಾಸಕ ಮುನಿರತ್ನ ದಬ್ಬಾಳಿಕೆ ಹೆಚ್ಚಾಗಿದ್ದು, ಗುತ್ತಿಗೆದಾರನಿಗೆ ಲಂಚ ಕೇಳಿದ್ದಲ್ಲದೇ, ಪತ್ನಿ ಮನೆಗೆ ಕಳುಹಿಸುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ. ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ವಿಭಾಗದ ಮಾಧ್ಯಮ ವಕ್ತಾರ ವಿನಾಯಕ ಬಿ. ಎನ್. ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿರತ್ನ ಮಾಡಿದ್ದ ಷಡ್ಯಂತ್ರವೆಲ್ಲವೂ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಬಿಜೆಪಿ ಪಕ್ಷದ ನಾಯಕರ ವಿರುದ್ಧವೇ ಸಂಚು ಹೂಡಿದ್ದು ಬಯಲಾಗಿದೆ. ಹನಿಟ್ರ್ಯಾಪ್, ಜಾತಿ ನಿಂದನೆ, ಲಂಚ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ಮುನಿರತ್ನ ಶಾಸಕ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ಯೋಗ್ಯತೆ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಮುನಿರತ್ನ ಬಂಧನ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ, ಷಡ್ಯಂತ್ರವನ್ನೂ ರೂಪಿಸಿಲ್ಲ. ಬಿಜೆಪಿ ನಾಯಕರು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಅವರ ವಿರುದ್ಧ
ಪ್ರಕರಣ ದಾಖಲಿಸಿ ಕೂಡಲೇ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತು ಹೇಳಿರುವ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ಮುಂದಾಗಬೇಕೆಂದು ಆಗ್ರಹಿಸಿದರು.
ಈ ಹಿಂದೆ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಮಾತನಾಡಿ, ಕಾಂಗ್ರೇಸ್ಸಿಗರು ನಮ್ಮ ಮನೆಯ ಹೆಣ್ಣು ಮಕ್ಕಳ ತಾಳಿ ಬಿಚ್ಚಿ ಬೇರೆಯವರಿಗೆ ಹಂಚುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ರಾಜ್ಯದಲ್ಲಿ ಏನಾಗುತ್ತಿದೆ
ಎಂದು ರಾಜ್ಯದ ಜನರು ನೋಡುತ್ತಿದ್ದಾರೆ. ಬಿಜೆಪಿ ಶಾಸಕರು ಗುತ್ತಿಗೆದಾರರ ಪತ್ನಿಯರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹೆಣ್ಣು ಮಕ್ಕಳನ್ನು ನಿಮ್ಮ ಸೇವಕರನ್ನಾಗಿ ಮಾಡಿಕೊಳ್ಳುವ ಮನಸ್ಥಿತಿ ಸರಿಯಲ್ಲ. ರಾಜ್ಯದಲ್ಲಿ ಇಂತಹ ಕೃತ್ಯಗಳಿಗೆ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಡಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಯಾವ ರೀತಿ ಭ್ರಷ್ಟಾಚಾರ ನಡೆಸಿದೆ ಎಂಬುದು ಎಲ್ಲರಿಗೂ ಗೊತ್ತು. ಇನ್ನಾದರೂ ಬಿಜೆಪಿ ಶಾಸಕರು ಇಂತಹ ಕೃತ್ಯಗಳಿಗೆ ಕೈಹಾಕದೇ ತಮ್ಮ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಟಿ. ಶ್ರೀನಿವಾಸ್, ಲಿಂಗರಾಜ್, ಜಿ. ಸೋಮಶೇಖರ್, ಚೌಡೇಶ್ವರ ಹಾಜರಿದ್ದರು.