SUDDIKSHANA KANNADA NEWS/ DAVANAGERE/ DATE:15-09-2024
ದಾವಣಗೆರೆ: ಗುರುಗಳು ಆಗುವುದು ನಿಮ್ಮಿಂದಲೇ. ರಾಜಕಾರಣಿಗಳು ಮಾಜಿ ಆಗುತ್ತಾರೆಯೇ ಹೊರತು, ಮಠದ ಗುರುಗಳಲ್ಲ. ಶಾಸಕ, ಮಂತ್ರಿಗಳಾಗುವುದು ನಿಮ್ಮಿಂದಲೇ, ಗುರುಗಳು ಆಗುವುದು ನಿಮ್ಮಿಂದಲೇ. ನಿಮ್ಮನ್ನು ಬಿಟ್ಟು ಯಾರೂ ಏನು ಮಾಡಲು ಆಗದು. ಹಾಗಾಗಿ, ಮಠದ ಭಕ್ತರೇ ನಮಗೆ ಶ್ರೀರಕ್ಷೆ ಎಂದು ಸಿರಿಗೆರೆ ಮಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂದೇಶ ನೀಡುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಹರಿಹರ ತಾಲೂಕಿನ ಸಾಧು ವೀರಶೈವ ಸಮಾಜದಿಂದ ಮಲೇಬೆನ್ನೂರಿನ ಯಲವಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಸಿರಿಗೆರೆಯಲ್ಲಿ ಸೆಪ್ಟಂಬರ್ 24ರಂದು ನಡೆಯುವ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ
32 ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗುರುಗಳಿಗೆ ಅಂಜಿ ಶಿಷ್ಯರು, ಶಿಷ್ಯರಿಗೆ ಅಂಜಿ ಗುರುಗಳು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮಠದ 100 ಕ್ಕೆ 99,99 ಭಕ್ತರು ಮನ್ನು ನಮ್ಮ ಬಗ್ಗೆ ಭಕ್ತಿ ಭಕ್ತಿ – ಭಾವ ಹೊಂದಿದ್ದಾರೆ. ಸಿರಿಗೆರೆ ಮಠವೂ ಭಕ್ತಿ – ಭಾವದಿಂದಲೇ ಬೆಳೆದು
ಬಂದಿದೆ ಎಂದು ಹೇಳಿದ ಶ್ರೀಗಳು,ಮುಂದಿನ ವರ್ಷ ನಿಟ್ಟೂರಿನಲ್ಲಿ ಗ್ರಾಮಸ್ಥರ ಕೋರಿಕೆಯಂತೆ ಮುಂದಿನ ವರ್ಷ ಭಕ್ತಿ ಸಮರ್ಪಣ ಸಮಾರಂಭ ನಡೆಸಲಾಗುವುದು ಎಂದು ತಿಳಿಸಿದರು.
ಸುಸಂಸ್ಕೃತ ಸಮಾಜ ಬೆಳೆಸುವಲ್ಲಿ ಹಿರಿಯ ಗುರುಗಳ ಪಾತ್ರ ಪ್ರಮುಖ. ಅವರು ಮಹಾನ್ ಪುರುಷರು. ಹಿರಿಯ ಗುರುಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದರು. ಹಿಂದಿನ ಗುರುಗಳಿಗೆ ಬಿಟ್ಟಿಲ್ಲ. ಇನ್ನು ನಮ್ಮ ಮೇಲೆ ಆರೋಪ ಮಾಡಿರುವುದರಲ್ಲಿ
ವಿಶೇಷ ಏನಿಲ್ಲ. ಕೆಲವೊಬ್ಬರು ಸಮಾಜದಲ್ಲಿ ಈ ರೀತಿ ಇರುತ್ತಾರೆ. ಹಿರಿಯ ಗುರುಗಳ ಮೇಲೆ ಬಂದಿದ್ದ ಆರೋಪವನ್ನು ಭಕ್ತರ ಸಮ್ಮುಖದಲ್ಲಿಯೇ ಸಾಕ್ಷಿಗಳ ಸಮೇತ ಸುಳ್ಳು ಎಂದು ಸಾಬೀತುಪಡಿಸಿದ್ದರು. ಇದನ್ನು ಆತ್ಮಚರಿತ್ರೆಯಲ್ಲಿಯೂ ಬರೆದಿದ್ದಾರೆ. ಗುರುಗಳ ಮೇಲಿನ ಆರೋಪಕ್ಕೆ ಹೋಲಿಸಿದರೆ ನಮ್ಮ ಮೇಲೆ ಮಾಡಿರುವ ಆರೋಪ ಏನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಷ್ಟೇ ಸವಾಲು ಎದುರಾದರೂ ಎದುರಿಸುವ ಶಕ್ತಿ ಶ್ರೀ ಮಠ ಹಾಗೂ ಸಮಾಜಕ್ಕಿದೆ. ಮರುಳಸಿದ್ದರ ಕಾಲದಲ್ಲಿ ಸಮಾಜದ ಉನ್ನತಿಗಾಗಿ ಎದುರಿಸಿದ ಸಮಸ್ಯೆಗಳು ಇತಿಹಾಸ ಪುಟ ಸೇರಿದೆ. ದಾವಣಗೆರೆಯಲ್ಲಿ ನಮ್ಮ ವಿರುದ್ಧ ನಡೆಸಿದ ರೆಸಾರ್ಟ್ ಸಭೆಗೆ ಮನನೊಂದ ಭಕ್ತರು ತಾವೇ ತಾವಾಗಿ ಬಂದು ನಮಗೆ ಶಕ್ತಿ ಭಾವ ತೋರಿಸಿದ್ದಾರೆಯೇ ನಾವ್ಯಾರನ್ನೂ ಸಿರಿಗೆರೆಗೆ ಬನ್ನಿ ಎಂದು ಆಹ್ವಾನಿಸಿಲ್ಲ. ನಾವು ಮಠಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಕಾಣಿಕೆ ಪುಟ್ಟಿಯಲ್ಲಿನ ಹಣ 8 ಕೋಟಿ ರೂಪಾಯಿ ಆಗಿದೆ. ಆ ಹಣದಲ್ಲಿ 25 ಲಕ್ಷ ರೂ.ಗಳನ್ನು ನಮಗೆ ಚಿಕಿತ್ಸೆ ನೀಡಿದ ಸ್ಪರ್ಶ ಆಸ್ಪತ್ರೆಗೆ ಡಾ . ಶರಣ್ ಪಾಟೀಲ್ ಅವರಿಗೆ ನೀಡಿದ್ದೇವೆ. ನಮಗೆ ಚಿಕಿತ್ಸೆ ನೀಡಿದಾಗ ಯಾವತ್ತೂ ಹಣ ಪಡೆದಿರಲಿಲ್ಲ. ಆದರೆ ನಾವೇ ತೆರಳಿ ಕೊಟ್ಟು ಬಂದಿದ್ದೆವು ಎಂದು ಹೇಳಿದರು.
ದಾವಣಗೆರೆ ರೆಸಾರ್ಟ್ ಸಭೆ ವಿರೋಧಿಸಿ ಮಠದ ಬಳಿ ಸಾಕಷ್ಟು ಭಕ್ತರು ಸ್ವಯಂಪ್ರೇರಿತರಾಗಿ ಬಂದಿದ್ದರು. ನಾವು ಎಷ್ಟೋ ರೋಗಿಗಳಿಗೆ ರಿಯಾಯಿತಿಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಎಲ್ಲಿಯೂ ಉಚಿತವಾಗಿ ಚಿಕಿತ್ಸೆ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೆಲವರು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ , ಕೋರ್ಟ್ ಗೂ ಹೋಗಿದ್ದಾರೆ. ಸಿರಿಗೆರೆ ಮಠಕ್ಕೆ ಕೋರ್ಟ್ ಹೊಸದೇನೂ ಅಲ್ಲ. ಸತ್ಯಕ್ಕಾಗಿ ಮಠ ಮೊದಲಿನಿಂದಲೂ ಹೋರಾಟ ಮಾಡಿ ಗೆದ್ದಿದೆ . ಈಗಲೂ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಶ್ರೀಗಳು ಹೇಳಿದರು.
ಮಠ ಹುಟ್ಟಿರುವುದು ರಾಜಕೀಯಕ್ಕಾಗಿ ಅಲ್ಲ ಗುರುಗಳಿಗೆ ನೀವು ಸಲ್ಲಿಸಿದ ಭಕ್ತಿ ಸಮರ್ಪಣೆ ಸಂತಸದ ವಿಚಾರ. ಧೀರರ ಪಡೆ ಎಂಬಂತೆ ಯಲವಟ್ಟಿಯ ಈ ಸಮಾರಂಭಕ್ಕೆ ಆಗಮಿಸಿದ ನನ್ನನ್ನು ಗ್ರಾಮದ ಯುವಕರು ಬೈಕ್ ರಾಲಿ ಮೂಲಕ ಕರೆ ತಂದರ ಪೂರ್ಣ ಮಹಿಳೆಯರು ಕುಂಭಮೇಳದೊಂದಿಗೆ ಭಕ್ತಿ ಸಮರ್ಪಿಸಿದ್ದಾರೆ . ಸಮಾಜದಲ್ಲಿ ಇಂತಹ ಸುಸಂಸ್ಕೃತಿ ಬೆಳೆಸಿದ ಮತ್ತು ಸಮಾಜಕ್ಕೆ ಎಲ್ಲಾ ಹಂತದಲ್ಲೂ ಶಕ್ತಿ ತುಂಬಿದೆ ಎಂದು ತಿಳಿಸಿದರು.
ಶಾಸಕ ಬಿ. ಪಿ. ಹರೀಶ್, ಬಿಜೆಪಿ ಮುಖಂಡ ವೀರೇಶ್ ಹನಗವಾಡಿ, ಸಮಾಜದ ಕಾರ್ಯದರ್ಶಿ ಇಟಗಿ ಶಿವಣ್ಣ, ರಾಜಪ್ಪ, ಆಧ್ಮಾತ್ಯ ಚಿಂತಕ ಡಿ. ಸಿದ್ದೇಶ್, ಉಪಾಧ್ಯಕ್ಷ ಹೆಚ್. ಎಂ. ಶಿವಾನಂದಪ್ಪ, ಸದಸ್ಯರಾದ ಡಿ. ಹೆಚ್. ರತ್ನಮ್ಮ, ವನಜಾಕ್ಷಮ್ಮ ಮತ್ತಿತರರು ಹಾಜರಿದ್ದರು. ಹರಿಹರ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಗೌಡ್ರ ಮಹಾದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.