Home ಕ್ರೈಂ ನ್ಯೂಸ್ ಅನ್ವರ್ ಬಾಷಾಗೆ “ಕಿಸ್” ಕೊಟ್ಟಿರಬಹುದು, ನನಗೆ ಹೆಚ್ಚೇನೂ ಪರಿಚಯವಿಲ್ಲ: ಜಮೀರ್ ಅಹ್ಮದ್ ಉಲ್ಟಾ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಅನ್ವರ್ ಬಾಷಾಗೆ “ಕಿಸ್” ಕೊಟ್ಟಿರಬಹುದು, ನನಗೆ ಹೆಚ್ಚೇನೂ ಪರಿಚಯವಿಲ್ಲ: ಜಮೀರ್ ಅಹ್ಮದ್ ಉಲ್ಟಾ!

Share
ಜಮೀರ್ ಅಹ್ಮದ್
Share

ದಾವಣಗೆರೆ: ನಗರದ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಅನ್ವರ್ ಬಾಷಾ ಎಂಬಾತ ವಸತಿ ಸಚಿವ ಜಮೀರ್ ಅಹ್ಮದ್ ಆಪ್ತ ಎಂದು ತಿಳಿದು ಬಂದಿತ್ತು. ಆದರೆ, ಈಗ ದಾವಣಗೆರೆಗೆ ಆಗಮಿಸಿದ್ದ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾತ್ರವಲ್ಲ, ಸಚಿವರ ಜೊತೆ ಅನ್ವರ್ ಬಾಷಾ ಆಪ್ತನಾಗಿದ್ದು, ತನ್ನ ಮನೆಯ ಗೃಹಪ್ರವೇಶಕ್ಕೂ ಆಹ್ವಾನಿಸಿದ್ದ. ಇದನ್ನು ಮನ್ನಿಸಿ ಜಮೀರ್ ಅಹ್ಮದ್ ಅವರೂ ಬಂದಿದ್ದರು. ಜೊತೆಗೆ ಜಮೀರ್ ಅಹ್ಮದ್ ಮುತ್ತಿಡುವ ಫೋಟೋ ಸಹ ವೈರಲ್ ಆಗಿತ್ತು.

ದಾವಣಗೆರೆಗೆ ಆಗಮಿಸಿದ್ದ ಜಮೀರ್ ಅಹ್ಮದ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಥೆಟಿಕ್ ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡು ಬಂಧನಕ್ಕೊಳಗಾಗಿರುವ ಅನ್ವರ್ ಬಾಷಾ ನನಗೆ ಹೆಚ್ಚೇನೂ ಪರಿಚಯ ಇಲ್ಲ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಮೂಲಕ ಕಳೆದ ಎರಡು ವರ್ಷಗಳ ಹಿಂದೆ ಪರಿಚಯ ಆಗಿದ್ದ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹೇಳಿದ್ದಕ್ಕೆ ನಾನು ಬಾಷಾ ಮದುವೆ, ಗೃಹ ಪ್ರವೇಶಕ್ಕೆ ಆಗಮಿಸಿದ್ದೆ. ಈ ಕಾರ್ಯಕ್ರಮಗಳಿಗೆ ಆಗ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರೂ ಸಹ ಆಗಮಿಸಿದ್ದರು ಎಂದು ಹೇಳಿದರು.

ಮುಖ್ಯಾಂಶಗಳು: 

  •  “ಪರಿಚಯವಿಲ್ಲದಿದ್ದರೂ ಮುತ್ತು ಕೊಡುವುದು ನನ್ನ ಸ್ವಭಾವ” ಎಂದ ಜಮೀರ್ ಅಹ್ಮದ್.

  • ತುರ್ಚಘಟ್ಟದ ಬಂಗಲೆಯಲ್ಲಿ ಸಚಿವರ ಉಪಸ್ಥಿತಿ; ಡ್ರಗ್ಸ್ ದಂಧೆಯ ಹಣದ ಹೂಡಿಕೆ ಶಂಕೆ.

  •  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೂಲಕವೇ ಆರೋಪಿ ಅನ್ವರ್ ಬಾಷಾ ಪರಿಚಯವಾಗಿದ್ದೇಗೆ?

  •  ಕಾಂಗ್ರೆಸ್ ಮುಖಂಡರ ಬಂಧನದಿಂದ ಕೈ ನಾಯಕರಿಗೆ ಎದುರಾದ ಮುಜುಗರದ ಪ್ರಶ್ನೆಗಳು.

ಅನ್ವರ್ ಬಾಷಾಗೆ “ಕಿಸ್” ಬಗ್ಗೆ ಹೇಳಿದ್ದೇನು? 

ನಾನು ಖುಷಿಯಾದಾಗ ಮುತ್ತು ನೀಡುತ್ತೇನೆ. ಇದರಲ್ಲಿ ಹೊಸತೇನಲ್ಲ. ಅನ್ವರ್ ಬಾಷಾ ಬಂದಾಗಲೂ ಮುತ್ತು ಕೊಟ್ಟಿರಬಹುದು. ಎಷ್ಟೋ ಮಂದಿಗೆ ಮುತ್ತು ನೀಡಿರುತ್ತೇನೆ. ಹಾಗೆಂದ ಮಾತ್ರಕ್ಕೆ ಅವರೆಲ್ಲರೂ ನನ್ನ ಆಪ್ತರಾಗಿಬಿಡುತ್ತಾರಾ ಎಂದು ಪ್ರಶ್ನಿಸಿದರು.

ಯಾರು ಈ ಅನ್ವರ್ ಬಾಷಾ?

ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ಸಿಕ್ಕಿ ಬಿದ್ದಿರುವ ಕಾಂಗ್ರೆಸ್ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಅನ್ವರ್ ಬಾಷಾ ಹಿನ್ನೆಲೆಯೇ ರೋಚಕ.

ಆರಂಭದಲ್ಲಿ ಅಂಥ ಏನೂ ಹೇಳಿಕೊಳ್ಳುವಂತ ಸ್ಥಿತಿವಂತರಲ್ಲ. ಇದ್ದಕ್ಕಿದ್ದಂತೆ ಕೋಟ್ಯಂತರ ರೂಪಾಯಿ ಹಣ ಸಂಪಾದನೆ ಮಾಡಿದ್ದರು. ದಾವಣಗೆರೆಯ ತುರ್ಚಘಟ್ಟದಲ್ಲಿ ಬಂಗಲೆಯಂಥ ಮನೆ ಕಟ್ಟಿಸಿದಾಗಲೇ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ವಸತಿ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಂತೆ ಯಾವಾಗಲೂ ವರ್ತಿಸುತ್ತಿದ್ದ.

ಅನ್ವರ್ ಬಾಷಾ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ. ಜೊತೆಗೆ ಗುತ್ತಿಗೆದಾರನಾಗಿಯೂ ಗುರುತಿಸಿಕೊಂಡಿದ್ದ. ತುರ್ಚಘಟ್ಟದಲ್ಲಿ ಕಟ್ಟಿದ್ದ ಭವ್ಯ ಭಂಗಲೆಯ ಮನೆ ಗೃಹ ಪ್ರವೇಶಕ್ಕೆ ಸಚಿವ ಜಮೀರ್ ಅಹ್ಮದ್, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನ ಗಣ್ಯಾತಿ ಗಣ್ಯರು ಹೋಗಿದ್ದರು. ಇಡೀ ಊರಿಗೆ ಊಟ ಹಾಕಿಸಿ ಗಮನ ಸೆಳೆದಿದ್ದ ಅನ್ವರ್ ಬಾಷಾ ಆದಾಯದ ಮೇಲೆ ಎಲ್ಲರ ಕಣ್ಣಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅನ್ವರ್ ಬಾಷಾ ಆಗಾಗ್ಗೆ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಕಾಂಗ್ರೆಸ್ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ ಅಲಿಯಾಸ್ ಜಿ. ಎಸ್. ವೇದಮೂರ್ತಿ ಆಪ್ತ ಬಳಗದಲ್ಲಿ ಒಬ್ಬನಾಗಿದ್ದ. ಡ್ರಗ್ಸ್ ಕೇಸ್ ನಲ್ಲಿ ಕಾಂಗ್ರೆಸ್ ಮುಖಂಡರು ಸಿಕ್ಕಿ ಬೀಳುತ್ತಿರುವುದು ಪಕ್ಷಕ್ಕೆ ಹಾಗೂ ನಾಯಕರಿಗೆ ಮುಜುಗರ ತಂದಿತ್ತು.

ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡು ಕೋಟ್ಯಂತರ ರೂಪಾಯಿ ಹಣ ಸಂಪಾದನೆ ಮಾಡಿರಬಹುದು ಎಂದು ತುರ್ಚಘಟ್ಟದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಕಮೀಷನ್ ಆಸೆ ದಂಧೆಗೆ ಬಿದ್ದಿದ್ದಾರೆ. ಈ ಹಿಂದಿನಿಂದಲೂ ಕಮೀಷನ್ ದಂಧೆ ನಡೆಸಿಕೊಂಡು ಬರುತ್ತಿದ್ದಾರೆ. ಬೇರೆ ಬೇರೆ ವಿಭಾಗಗಳಲ್ಲಿ ಸಚಿವ ಮಲ್ಲಿಕಾರ್ಜುನ್ ಅವರಿಗೆ ಗೊತ್ತಿಲ್ಲದಂತೆ ಇದುವರೆಗೆ ಕೋಟ್ಯಂತರ ರೂಪಾಯಿ ಬೇರೆ ಬೇರೆ ರೀತಿಯಲ್ಲಿ ಕಮೀಷನ್ ತಿಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೇ ಆರೋಪಿಸತೊಡಗಿದ್ದಾರೆ.

ನಗರದ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ವೇಳೆ ಕಾಂಗ್ರೆಸ್ ಮುಖಂಡ ಶಾಮನೂರು ವೇದಮೂರ್ತಿ ಸೇರಿದಂತೆ ನಾಲ್ವರು ಸಿಕ್ಕಿಬಿದ್ದಿದ್ದರು. ಈಗ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕಿದ್ದರು.

Share

Leave a comment

Leave a Reply

Your email address will not be published. Required fields are marked *