ಭದ್ರಾವತಿ: ಆಸ್ತಿಗಾಗಿ ಅರಸುತ್ತಾ ಆರೋಗ್ಯ ಕಳೆದುಕೊಳ್ಳಬಾರದು. ಆಸ್ತಿಗಾಗಿ ಆರೋಗ್ಯ ಕಳೆದುಕೊಂಡರೆ, ನಾಳೆ ಆರೋಗ್ಯಕ್ಕಾಗಿ ಆಸ್ಪತ್ರೆಗೆ ಅಲೆಯುತ್ತಾ, ಅದೇ ಆಸ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಿವಿಮಾತು ಹೇಳಿದರು.
ಈ ಸುದ್ದಿಯನ್ನೂ ಓದಿ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಕಂಪ್ಲೀಟ್ ಡೀಟೈಲ್ಸ್
ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಎರಡನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಆರೋಗ್ಯ ಮತ್ತು ಸಮಾಜ ವಿಷಯದ ಗೋಷ್ಠಿಯಲ್ಲಿ ಆಶೀರ್ವಚನ ದಯಪಾಲಿಸಿ, ಹಣ ಸಂಪಾದನೆ ಮಾಡಬಾರದು ಎಂದಿಲ್ಲ. ಹಣ ಸಂಪಾದನೆಯೂ ಒಂದು ಮೌಲ್ಯವಾಗಿದೆ. ಆದರೆ, ಹಣ ಸಂಪಾದನೆಯ ಮಾರ್ಗ ಸರಿಯಾಗಿರಬೇಕು, ಆ ಮಾರ್ಗ ಧರ್ಮದ್ದಕ್ಕಾಗಿ ಎಂದು ಹೇಳಿದರು.
ಮದುವೆಯ ಸಂದರ್ಭದಲ್ಲಿ ಪುರೋಹಿತರು, ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ ಎಂದು ಹೇಳುತ್ತಾರೆ. ಈ ಮಂತ್ರಕ್ಕೆ ಸುಂದರ ಅರ್ಥವಿದೆ. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳು ನಾಲ್ಕು ಪುರುಷಾರ್ಥಗಳು. ಇವುಗಳ ಸಂಪಾದನೆ ಮಾಡಬೇಕು, ಇದರಲ್ಲಿ ತಪ್ಪಿಲ್ಲ. ಆದರೆ, ಇದಕ್ಕೆಲ್ಲ ಧರ್ಮ ಮೂಲ ಆಧಾರ ಸ್ಥಾಪಿಸಿದ್ದಾರೆ ಎಂದು ಶ್ರೀಜಗದ್ಗುರುಗಳು ಅಭಿಪ್ರಾಯಪಟ್ಟರು.
ಬೆಚ್ಚಗಿನ ನೀರು ಸೇವಿಸಿ:
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಬೆಳಿಗ್ಗೆ ಎದ್ದು ಬೆಚ್ಚಗಿನ ನೀರನ್ನು ಸ್ವಲ್ಪವಾಗಿ ಕುಡಿಯಬೇಕು, ಇದರಿಂದ ಆರೋಗ್ಯಕ್ಕೆ ಸಹಾಯವಾಗುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಹೊಂದಲು ನೈಸರ್ಗಿಕ ಜೀವನ ಪದ್ಧತಿಯನ್ನು ತಿಳಿದುಕೊಳ್ಳಬೇಕು. ಯಾವ ಸಮಸ್ಯೆಗೂ ಗುಳಿಗೆ ತೆಗೆದುಕೊಳ್ಳುವ ಬದಲು, ನೈಸರ್ಗಿಕ ಪದ್ಧತಿಯ ಮೂಲಕ ಪರಿಹಾರ ಮಾಡಬೇಕು ಎಂದು ಹೇಳಿದರು.
ಪ್ರತಿಯೊಂದು ಕಾಯಿಲೆಗೂ ಗುಳಿಗೆ ಇದೆ. ಆದರೆ, ಪ್ರತಿಯೊಂದು ಗುಳಿಗೆಯಿಂದಲೂ ಅಡ್ಡ ಪರಿಣಾಮವಿದೆ. ಹೀಗಾಗಿ ಯೋಗದಿಂದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬೇಕು. ದಿನಕ್ಕೆ ಒಂದು ಗಂಟೆ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಮಾಡಬೇಕು. ಇದೇ ಜೀವನಕ್ಕಾಗಿ ಅತ್ಯುತ್ತಮ ಹೂಡಿಕೆಯಾಗಿದೆ ಎಂದರು.
ಬಿಪಿ, ಶುಗರ್, ಕ್ಯಾನ್ಸರ್ ಬರಲು ಕಾರಣವೇನು?
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆರೋಗ್ಯ ಎಂದರೆ ಕೇವಲ ರೋಗ ಇಲ್ಲದೇ ಇರುವುದು. ಭೌತಿಕ, ಮಾನಸಿಕ, ಆಧ್ಯಾತ್ಮಿಕವಾಗಿ ಹಾಗೂ ಭಾವನಾತ್ಮಕವಾಗಿ ಸೌಖ್ಯವಾಗಿದ್ದಾರೆ. ಎಲ್ಲಾ ಅಂಶಗಳಲ್ಲೂ ಆರೋಗ್ಯವಾಗಿರಲು ನಾವು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಬಿಪಿ, ಸಕ್ಕರೆ ಕಾಯಿಲೆ ಹಾಗೂ ಕ್ಯಾನ್ಸರ್ ಜೀವನಶೈಲಿಯಿಂದ ಬರುವ ಕಾಯಿಲೆ ಕಾರಣ. ಪ್ರತಿ ಹತ್ತರಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ ಇದೆ ಮತ್ತು ಪ್ರತಿ ಸಾವಿರ ವ್ಯಕ್ತಿಗಳಲ್ಲಿ ಒಬ್ಬರಿಗೆ ಕ್ಯಾನ್ಸರ್ ಇದೆ. ಉತ್ತಮ ಜೀವನ ಶೈಲಿಯಿಂದ ಈ ರೋಗಗಳನ್ನು ತಡೆಗಟ್ಟಲು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಮಹಿಳೆಯರಲ್ಲಿ ಹೆಚ್ಚು ಜನರಿಗೆ ಗರ್ಭಕೋಶದ ಕ್ಯಾನ್ಸರ್ ತಡೆಯಲು ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ. ಲಸಿಕೆ ಕೊಡಬೇಕಿದೆ. ಈ ಬಗ್ಗೆ ಮುಂಜಾಗ್ರತೆ ವಹಿಸಿ, 9 ರಿಂದ 14 ವರ್ಷದೊಳಗೆ ಎರಡು ಡೋಸ್ ಲಸಿಕೆ ಕೊಡಿ ಎಂದವರು ಕರೆ ನೀಡಿದರು.
ಸೇವೆ ಸಿಕ್ಕಿದ್ದರಿಂದ ಶಾಸಕನಾದೆ:
ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ನಾನು ಕಟ್ಟ ಕಡೆಯ ಬಡ ಕುಟುಂಬದಲ್ಲಿ ಜನಿಸಿದೆ. ನಾನು ಶ್ರೀಮಠದ ಭಕ್ತರೊಬ್ಬರ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ನೆನಪಿಸಿಕೊಂಡರು.
33 ವರ್ಷ ಕಾಲ ನಳಂದ ಪಿ.ಯು. ಶಾಲೆಯಲ್ಲಿ ಜವಾನನಾಗಿ ಕೆಲಸ ಮಾಡಿದ್ದೆ. 1992ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಂಟಪದ ನಿರ್ಮಾಣದಿಂದ ಹಿಡಿದು, ತರಳಬಾಳು ಹುಣ್ಣಿಮೆ ಕಾರ್ಯದಲ್ಲಿ ಪರಿಚಾರಕನಾಗಿದ್ದೆ. ಇಂತಹ ಸೇವೆ ಸಿಕ್ಕಿದ್ದರಿಂದ ನನಗೆ ಶಾಸಕನಾಗುವ ಮೂಲಕ ಮುಕ್ತಿ ಸಿಕ್ಕಿದೆ ಎಂದು ತಿಳಿಸಿದರು.





Leave a comment