ದಾವಣಗೆರೆ: “ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
READ ALSO THIS STORY: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಕಂಪ್ಲೀಟ್ ಡೀಟೈಲ್ಸ್
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯ ಮತ್ತು ಗೌರವ, ನಮ್ಮ ದೇಶವು 1947ರಲ್ಲಿ ಬ್ರಿಟೀಷರ ಗುಲಾಮಗಿರಿಯಿಂದ ಸ್ವತಂತ್ರವಾಯಿತು. ಆದರೆ 1950ರ ಜನವರಿ 26 ರಂದು ಸಂವಿಧಾನ ಜಾರಿಗೆ ಬರುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಮ್ಮೆಗೆ ಪಾತ್ರವಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ನಮಗೆ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ನೀಡಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಪ್ರಗತಿ:
ಜಿಲ್ಲೆಯಲ್ಲಿ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಅಂಕಿ-ಅಂಶಗಳೊಂದಿಗೆ ಹಂಚಿಕೊಂಡರು. ಶಕ್ತಿ ಯೋಜನೆ: ಜಿಲ್ಲೆಯಲ್ಲಿ ಇದುವರೆಗೆ 12.30 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇವರ ಟಿಕೆಟ್ ವೆಚ್ಚ 361.67 ಕೋಟಿ ರೂ. ಮೊತ್ತವನ್ನು ಸರ್ಕಾರ ಭರಿಸಿದೆ.
ಗೃಹಲಕ್ಷ್ಮಿ:
ಜಿಲ್ಲೆಯ 3.74 ಲಕ್ಷ ಮನೆ ಯಜಮಾನಿಯರ ಖಾತೆಗೆ ಮಾಸಿಕ 2 ಸಾವಿರದಂತೆ ಒಟ್ಟು 1690 ಕೋಟಿ ರೂ. ಜಮಾ ಮಾಡಲಾಗಿದೆ.
ಅನ್ನಭಾಗ್ಯ:
ಜಿಲ್ಲೆಯ 13.95 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದು, ಫೆಬ್ರವರಿ 2025 ರಿಂದ ನಗದು ಬದಲಾಗಿ ಅಕ್ಕಿ ನೀಡಲಾಗುತ್ತಿದೆ.
ಗೃಹಜ್ಯೋತಿ:
4.62 ಲಕ್ಷ ಕುಟುಂಬಗಳು 200 ಯುನಿಟ್ ವರೆಗೆ ಸಬ್ಸಿಡಿ ಪಡೆಯುತ್ತಿವೆ.
ಯುವನಿಧಿ:
9,858 ಪದವೀಧರರಿಗೆ 28.63 ಕೋಟಿ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 23.29 ಲಕ್ಷ ರೂ. ನಿರುದ್ಯೋಗ ಭತ್ಯೆ ನೀಡಲಾಗಿದೆ.
ಪದ್ಮಶ್ರೀ ಪುರಸ್ಕೃತ ಸುರೇಶ್ ಹನಗವಾಡಿಗೆ ಅಭಿನಂದನೆ:
ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಅಧ್ಯಕ್ಷರಾಗಿ ಸಾಕಷ್ಟು ಜನರ ಸೇವೆ ಮಾಡಿದ ದಾವಣಗೆರೆಯ ಡಾ.ಸುರೇಶ್ ಹಾನಗವಾಡಿ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು ಇದು ಜಿಲ್ಲೆಯ ಹೆಮ್ಮೆ ವಿಷಯವಾಗಿದೆ, ಇವರಿಗೆ ಸರ್ಕಾರದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ , ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಪೂರ್ವ ವಲಯ ಮಹಾನಿರೀಕ್ಷಕರಾದ ಡಾ: ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ , ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸ್ವಾತಂತ್ರ್ಯ ಯೋಧರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





Leave a comment