ಬೆಂಗಳೂರು: ಸದನದಲ್ಲಿ ಬಟ್ಟೆ ಹರಿದುಕೊಂಡು, ಕೈ ಕೈ ಮಿಲಾಯಿಸಿಕೊಂಡ ಗೂಂಡಾಗಳಂತೆ ವರ್ತಿಸಿದ ಮಹಾನುಭಾವರು ಯಾವ ಪಕ್ಷದವರು? ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಸದನದಲ್ಲೇ ನೀಲಿ ಚಿತ್ರಗಳನ್ನು ವೀಕ್ಷಿಸಿ ದೇಶದ ಜನರೆದುರು ರಾಜ್ಯದ ಮಾನ ಕಳೆದವರು ಯಾವ ಪಕ್ಷದವರು? ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಸಭಾಪತಿಗಳ ಮುಖದ ಮೇಲೆ ಕಾಗದ ಪತ್ರಗಳನ್ನು ಹರಿದು ಬಿಸಾಕಿ ಅವಮಾನ ಮಾಡಿ ಸದನದಿಂದಲೇ ಉಚ್ಛಾಟಿತರಾದವರು ಯಾವ ಪಕ್ಷದವರು? ಇಂತಹ ಶಿಸ್ತು, ಸಂಸ್ಕಾರ, ಗೌರವ, ಘನತೆ ತಂದುಕೊಟ್ಟಿರುವ ಎಲ್ಲರೂ ನಮ್ಮ ಪಕ್ಷದವರೇ ಎಂದು ಎದೆ ತಟ್ಟಿ ಹೇಳುವ ಧೈರ್ಯ ಬಿಜೆಪಿಯವರಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯನ್ನೇ ದುರಪಯೋಗ ಪಡಿಸಿಕೊಂಡು ರಾಜ್ಯ ರಾಜಕಾರಣದಲ್ಲೇ ಅತ್ಯಂತ ಕರಾಳ ದಿನವನ್ನು ಸೃಷ್ಟಿ ಮಾಡಿರುವ ಬಿಜೆಪಿ ನಾಯಕರು ಸಂವಿಧಾನದ ಮೌಲ್ಯಗಳ ಬಗ್ಗೆ ಮಾತಾನಾಡಲು ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರು ರಾಜ್ಯದ ತೆರಿಗೆಯ ಹಣದಿಂದ ಅಧಿಕಾರ ಅನುಭವಿಸುತ್ತಿದ್ದಾರೆ ಹೊರತು “ನಾಗಪುರ”ದಲ್ಲಿರುವ ನೊಂದಣಿಯೇ ಆಗದ ಸಂಘಟನೆಗೆ ಬರುವ ಬಿಟ್ಟಿ ಹಣದಿಂದಲ್ಲ. ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದರೆ ರಾಜ್ಯಪಾಲರೇ ಇರಲಿ, ಸಾಂವಿಧಾನಿಕ ಹುದ್ದೆಯಲ್ಲೇ ಇರಲಿ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಲೇ ಇರುತ್ತೇವೆ. ಬಿಜೆಪಿಯವರಿಂದ ನೈತಿಕತೆ ಕಲಿಯುವ ದಾರಿದ್ರ್ಯ ನಮಗೆ ಬಂದಿಲ್ಲ, ಬರುವುದೂ ಇಲ್ಲ ಎಂದು ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.





Leave a comment