ಬೆಂಗಳೂರು: ರಾಜ್ಯಪಾಲರ ಹುದ್ದೆ ಒಂದು ಸಾಂವಿಧಾನಿಕ ಹುದ್ದೆ. ಸಂವಿಧಾನದ ಇತಿಮಿತಿಯಲ್ಲಿ ರಾಜ್ಯ ಸರ್ಕಾರಕ್ಕೂ ಪರಮಾಧಿಕಾರವಿದೆ. ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುವಂತಹ, ರಾಜ್ಯಪಾಲರ ಮೂಲಕ ತನ್ನ ರಾಜಕಾರಣ ಮಾಡುವಂತಹ ಅಧಿಕಾರವನ್ನೂ ಸಂವಿಧಾನ ರಾಜ್ಯ ಸರ್ಕಾರಕ್ಕೆ ಕೊಟ್ಟಿಲ್ಲ. ರಾಜ್ಯಪಾಲರ ಭಾಷಣದ ಉದ್ದೇಶ ಸರ್ಕಾರದ ಕಾರ್ಯವೈಖರಿಯ ಅವಲೋಕನ, ಯೋಜನೆಗಳ ಪ್ರಸ್ತಾಪ, ಆಡಳಿತದ ಮುನ್ನೋಟ ಮತ್ತು ಹಿನ್ನೋಟವೇ ಹೊರತು, ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ದೂಷಣೆ ಮಾಡಿಸುವ ಅಧಿಕಾರವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ವಕ್ತಾರರಂತೆ ಪರಿಗಣಿಸಿದೆಯೇ? ಈ ಮೂಲಕ ಸಾಂವಿಧಾನಿಕ ಹುದ್ದೆಯ ಘನತೆಯನ್ನು ತಗ್ಗಿಸಲು ಹೊರಟಿದೆಯೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರಿಗೆ ವಿಧಾನ ಮಂಡಲವನ್ನು ಉದ್ದೇಶಿಸಿ ಭಾಷಣ ಮಾಡುವ ಪರಮಾಧಿಕಾರವನ್ನು ಸಂವಿಧಾನ ನೀಡಿದೆ. ಆದರೆ, ರಾಜ್ಯ ಸರ್ಕಾರ ನೀಡಿರುವ ಭಾಷಣವನ್ನು ವಿವೇಚನಾರಹಿತವಾಗಿ ಓದುವ ಯಾವ ಕಡ್ಡಾಯ ನಿಯಮವೂ ಇಲ್ಲ. ಯಾವ ಅಂಶಗಳನ್ನು ಉಲ್ಲೇಖಿಸಬೇಕು, ಬೇಡ ಎನ್ನುವುದು ರಾಜ್ಯಪಾಲರಿಗೆ ಸಂವಿಧಾನ ದತ್ತವಾದ ಹಕ್ಕು ಎಂದು ಹೇಳಿದ್ದಾರೆ.
ಜಿ ರಾಮ್ ಜಿ ಯೋಜನೆ ಜನರ ದೃಷ್ಟಿಯಿಂದ ಉತ್ತಮವಾದ ಯೋಜನೆ. ಜನತೆಯ ಬದುಕನ್ನು ಬದಲಾಯಿಸುವಂತಹ ಯೋಜನೆ. ರಾಜಕೀಯ ವೇದಿಕೆಗಳಲ್ಲಿ ಯೋಜನೆಯನ್ನು ಟೀಕಿಸುವುದು ಬೇರೆ, ಆದರೆ ರಾಜ್ಯಪಾಲರ ಮೂಲಕ ಕೇಂದ್ರವನ್ನು ಟೀಕಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಸಂವಿಧಾನದ ಹುದ್ದೆಯ ದುರ್ಬಳಕೆಯಾಗುತ್ತದೆ. ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಆಲೋಚಿಸಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ವಿಬಿ ಜಿ ರಾಮ್ ಜಿ ಯೋಜನೆ ಜನ ಸಾಮಾನ್ಯರಿಗೆ ವರವಾಗಿದೆ. ಆದರೆ, ಎಲ್ಲದಕ್ಕೂ ರಾಜಕೀಯವನ್ನೇ ಮಾಡಬೇಕೆನ್ನುವ ಕಾಂಗ್ರೆಸ್ ಪಕ್ಷಕ್ಕೆ ಇದರಲ್ಲೂ ಹುಳುಕು ಕಂಡಿದೆ. ನೀತಿ ಆಯೋಗದ ಸಭೆ, ದಾವೋಸ್ ಆರ್ಥಿಕ ಶೃಂಗದಿಂದ ಗೈರಾದ, ಹಣಕಾಸು ಆಯೋಗದ ಮುಂದೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲು ವಿಫಲವಾದ ಮುಖ್ಯಮಂತ್ರಿಗಳು ಈಗ ಜನಪರವಾದ ಯೋಜನೆಯನ್ನು ವಿರೋಧಿಸುವ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರ ಅಹಂಕಾರದ ಪ್ರದರ್ಶನ ಆಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಅಹಂಕಾರ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದು ರಾಜ್ಯದ ದುರ್ದೈವ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಬೇಕಿದ್ದ ವಾಲ್ಮೀಕಿ ನಿಗಮದ ಹಣವನ್ನು ಕೊಳ್ಳೆ ಹೊಡೆದ, ಲೋಕಾಯುಕ್ತರಿಂದ, ಗುತ್ತಿಗೆದಾರರಿಂದ 60% ಕಮಿಷನ್ನಿನ ನೇರ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರ ಈಗ ರಾಜ್ಯಪಾಲರ ಹುದ್ದೆಯ ದುರ್ಬಳಕೆ ಸಜ್ಜಾಗಿರುವುದು ಆಶ್ಚರ್ಯವೇನೂ ಅಲ್ಲ ಎಂದು ತಿಳಿಸಿದ್ದಾರೆ.





Leave a comment