ಬೆಂಗಳೂರು: ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ; ಅವರು ಸಂವಿಧಾನದ ರಕ್ಷಕರು. ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ಯಾವುದೇ ಕಡ್ಡಾಯ ನಿಯಮ ಭಾರತದ ಸಂವಿಧಾನದಲ್ಲಿ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿ. ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಅಭಿವೃದ್ಧಿ ಶೂನ್ಯ ಆಡಳಿತ, ಸಾಲು ಸಾಲು ಭ್ರಷ್ಟಾಚಾರ ಹಗರಣಗಳು ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ರಾಜ್ಯಪಾಲರ ಭಾಷಣವನ್ನೇ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ಇದು ರಾಜಕೀಯ ಹತಾಶೆಯಿಂದ ಮಾಡುತ್ತಿರುವ ಸಂವಿಧಾನಾತ್ಮಕ ಸಂಸ್ಥೆಗಳ ಮೇಲಿನ ನೇರ ದಾಳಿ. ರಾಜ್ಯಪಾಲರ ನಡೆ ಸರಿಯಾಗಿದೆ ಎಂದು ಆರ್. ಅಶೋಕ ಹೇಳಿದ್ದಾರೆ.
ರಾಜ್ಯಪಾಲರು ಯಾವುದೇ ಪಕ್ಷದ ಪ್ರತಿನಿಧಿಗಳಲ್ಲ. ಅವರು ಸಂವಿಧಾನದ ಘನತೆಯನ್ನು ಮತ್ತು ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವ ಉನ್ನತ ಸಂವಿಧಾನಾತ್ಮಕ ಸಂಸ್ಥೆ. ಅವರ ಘನತೆಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಚ್ಯುತಿ ತರುವ ದುಸ್ಸಾಹಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಭಾರತದ ಸಂವಿಧಾನದ ವಿಧಿ 175 ಮತ್ತು 176 ರಾಜ್ಯಪಾಲರಿಗೆ ವಿಧಾನಸಭೆ ಹಾಗೂ ವಿಧಾನಪರಿಷತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ ನೀಡುತ್ತವೆ. ಆದರೆ ಸರ್ಕಾರ ತಯಾರಿಸಿದ ಪಠ್ಯದ ಪ್ರತಿಯೊಂದು ಪದವನ್ನೂ ರಾಜ್ಯಪಾಲರು ಯಾಂತ್ರಿಕವಾಗಿ ಯಥಾವತ್ತಾಗಿ ಓದಲೇಬೇಕು ಎಂಬ ನಿಯಮ ಸಂವಿಧಾನದಲ್ಲೂ ಇಲ್ಲ, ವಿಧಾನಸಭೆ ಅಥವಾ ವಿಧಾನಪರಿಷತ್ತಿನ ನಿಯಮಗಳಲ್ಲೂ ಇಲ್ಲ ಎಂದು ಹೇಳಿದ್ದಾರೆ.
ವಿಧಿ 163ರ ಪ್ರಕಾರ ರಾಜ್ಯಪಾಲರು ಸಾಮಾನ್ಯವಾಗಿ ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಿದರೂ, ಸಂವಿಧಾನವೇ ಅವರಿಗೆ ನಿರ್ದಿಷ್ಟ ವಿವೇಚನಾಧಿಕಾರ ನೀಡಿದೆ. ಸರ್ಕಾರ ತಯಾರಿಸಿದ ಭಾಷಣದಲ್ಲಿ ಅಸಂಬದ್ಧ, ಅಸಹ್ಯಕರ, ದ್ವೇಷಪೂರಿತ ಅಥವಾ ಸಂವಿಧಾನ ವಿರೋಧಿ ಅಂಶಗಳಿದ್ದರೆ, ಅವನ್ನು ಓದದೇ ಬಿಡುವುದು ರಾಜ್ಯಪಾಲರ ಸಂವಿಧಾನಾತ್ಮಕ ಹಕ್ಕು. ಕಾಂಗ್ರೆಸ್ ಸರ್ಕಾರ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು
ಸಲಹೆ ನೀಡಿದ್ದಾರೆ.
ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ನಿಯಮ ಕಾಂಗ್ರೆಸ್‌ನ ರಾಜಕೀಯ ಕೈಪಿಡಿಯಲ್ಲಿ ಇರಬಹುದು ಅಥವಾ ರಾಹುಲ್ ಗಾಂಧಿ ಅವರು ಹಿಡಿದುಕೊಂಡು ಅಡ್ಡಾಡುವ ಪುಸ್ತಕದಲ್ಲಿ ಇರಬಹುದು, ಆದರೆ ಭಾರತದ ಸಂವಿಧಾನದಲ್ಲಿ ಇಲ್ಲ. ನೀತಿ ಆಯೋಗದ ಸಭೆಗಳಿಗೆ ಗೈರು, ಜಿಎಸ್‌ಟಿ ಕೌನ್ಸಿಲ್‌ನಿಂದ ದೂರ, ಹಣಕಾಸು ಆಯೋಗದ ಮುಂದೆ ರಾಜ್ಯದ ಹಿತಾಸಕ್ತಿಯನ್ನು ಸಮರ್ಥವಾಗಿ ಮಂಡಿಸದ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡಲು ಆಸಕ್ತಿ ತೋರದೆ ವಿಫಲವಾಗಿ, ಈಗ ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಪ್ರೇರಿತ ಆರೋಪ ಮಾಡುವ ನಾಟಕವಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿವೃದ್ಧಿಗಿಂತ ರಾಜಕೀಯವೇ ಮುಖ್ಯ ಎಂದು ಆರೋಪಿಸಿದ್ದಾರೆ.
ಬಿ. ವೈ. ವಿಜಯೇಂದ್ರ ಮಾತನಾಡಿ, ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ರಾಜ್ಯಪಾಲರ ನಡೆ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.




Leave a comment