ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪುತ್ರ ಸಮರ್ಥ್ ಹೆಸರು ಕೇಳಿ ಬರುತ್ತಿದೆ. ಸಹೋದರ ಎಸ್. ಎಸ್. ಗಣೇಶ್ ಅವರು ಸ್ಪರ್ಧೆ ಮಾಡುವ ಕುರಿತಂತೆ ಮಾತುಕತೆ ನಡೆಸುತ್ತೇನೆ. ಇನ್ನೂ ಯಾರು ಸ್ಪರ್ಧಿಸಬೇಕೆಂಬ ಬಗ್ಗೆ ಮನೆಯಲ್ಲಿ ಚರ್ಚೆ ಆಗಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
READ ALSO THIS STORY: ತಾಳಿದವನು ಬಾಳಿಯಾನು.. ತಾಳ್ಮೆ ಮಿತಿಮೀರಿದಾಗ ತಾಳ್ಮೆಯೂ ಕೆಡುತ್ತೆ: ಶಿವಗಂಗಾ ಬಸವರಾಜ್ ನಿಗೂಢ ಮಾತು!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಂದೆ ಶಾಮನೂರು ಶಿವಶಂಕರಪ್ಪರ ನಿಧನದಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗುತ್ತಿದೆ. ಸಮರ್ಥ್ ಇನ್ನೂ ಯಂಗ್ ಇದ್ದಾನೆ. ಗಣೇಶ್ ಅವರು ಸ್ಪರ್ಧೆ ಬಗ್ಗೆ ಉತ್ಸುಹಕತೆ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಹೋದರನ ಜೊತೆ ಮಾತನಾಡುತ್ತೇನೆ. ಆ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಆಸೆ ಅನೇಕರಲ್ಲಿ ಇದೆ. ಕ್ಷೇತ್ರದಲ್ಲಿ ಕುಟುಂಬದ ಸದಸ್ಯರೇ ಸ್ಪರ್ಧಿಸಬೇಕೆಂಬ ಹಠ ಇಲ್ಲ. ಕ್ಷೇತ್ರ ಗೆಲ್ಲುವುದು ಮಾತ್ರವೇ ನಮ್ಮ ಹಾಗೂ ಪಕ್ಷದ ಗುರಿ. ಹೈಕಮಂಡ್ ಕೇಳಿದಾಗ ಕೂಲಂಕುಷವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಮನೆ ಮಂದಿಯೆಲ್ಲಾ ರಾಜಕೀಯ ಮಾಡಿದರೆ ಹೊಟ್ಟೆ ಪಾಡಿಗೆ ಏನು ಮಾಡಬೇಕು? ಸಮರ್ಥ್ ಇನ್ನು ಯುವಕನಿದ್ದು, ಚಿಕ್ಕವನಿದ್ದಾನೆ. ಇನ್ನು ಸಾಕಷ್ಟು ಕಾಲಾವಕಾಶ ಇದೆ. ಸಹೋದರ ಎಸ್. ಎಸ್. ಗಣೇಶ್ ಸ್ಪರ್ಧೆ ಬಗ್ಗೆ ಹೆಸರು ಚರ್ಚೆಯಾಗುತ್ತಿದೆ.ಈ ವಿಚಾರದಲ್ಲಿ ಕುಟುಂಬ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.




Leave a comment