ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಭಾಗದ ಆಸ್ತಿಗಳನ್ನು ಡಿಜಿಟಲೀಕರಣ ಮಾಡಿ ಸಾರ್ವಜನಿಕರಿಗೆ ಸುಲಭವಾಗಿ ಇ-ಖಾತಾ ಸೌಲಭ್ಯ ದೊರಕುವಂತೆ ಮಾಡಬೇಕು ಎಂಬ ಉದ್ದೇಶದಿಂದ ಇ-ಸ್ವತ್ತು ಅಭಿಯಾನದಡಿ ಇ-ಸ್ವತ್ತು ತಂತ್ರಾಂಶ 2.0 ಅನ್ನು ಆರಂಭಿಸಿದೆ.
ಆದರೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ತಂಡದ ವೈಫಲ್ಯದಿಂದಾಗಿ ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸಲಾಗುತ್ತಿಲ್ಲ. ಈ ಕುರಿತು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು, ಕೇಂದ್ರದಿಂದ ಆಗುತ್ತಿರುವ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತೆರಿಗೆ, ದರಗಳು ಮತ್ತು ಶುಲ್ಕಗಳು) ನಿಯಮಗಳು, 2025 ಅಡಿಯಲ್ಲಿ, 97 ಲಕ್ಷಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳಿಗೆ ಇ-ಖಾತಾ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮೀಣ ಜನರು ಗ್ರಾಮ ಪಂಚಾಯತಿ ಕಚೇರಿಗಳಿಗೆ ತೆರಳದೆ, ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಇ-ಖಾತಾ ಪಡೆಯಲು ಇದು ಅವಕಾಶ ನೀಡುತ್ತದೆ.
ತಾಂತ್ರಿಕ ಅಡೆತಡೆಗಳನ್ನು ಪರಾಮರ್ಶಿಸಿದ ಬಳಿಕ ಎನ್‌ಐಸಿ ತಾಂತ್ರಿಕ ಸಹಯೋಗದಲ್ಲಿ ಡಿಸೆಂಬರ್ 1, 2025 ರಂದು ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಆದರೆ ನಾಗರಿಕರು ಹಾಗೂ ಪಂಚಾಯತಿ ಮಟ್ಟದ ಬಳಕೆದಾರರು ಅನೇಕ ಕಾರ್ಯಾಚರಣಾ ದೋಷಗಳನ್ನು ಎದುರಿಸುತ್ತಿದ್ದಾರೆ. ಇ-ಖಾತಾಗಳಿಗೆ ಅಪ್ಲೈ ಮಾಡುವುದು, ವಿವಿಧ ಹಂತಗಳ ಪ್ರಕ್ರಿಯೆಗಳಿಗೆ ಅರ್ಜಿಗಳನ್ನು ಸಲ್ಲಿಸುವುದು, ಒಂದು ಮಾಡ್ಯೂಲ್‌ನಲ್ಲಿ ಅಳವಡಿಸಿದ ಬದಲಾವಣೆಯು ಮತ್ತೊಂದು ಮಾಡ್ಯೂಲ್‌ನ ಮೇಲೆಯೂ ಅಡ್ಡಪರಿಣಾಮ ಉಂಟುಮಾಡುವುದು ಮುಂತಾದ ಸಮಸ್ಯೆಗಳು ಪದೇ ಪದೇ ಕಾಡುತ್ತಿವೆ. ಎನ್‌ಐಸಿ ತಂಡಕ್ಕೆ ಹಲವು ಬಾರಿ ಮನವಿ ಮಾಡಿದರೂ, ಅವರು ಒಪ್ಪಿಕೊಂಡ ಕಾಲಮಿತಿಯಲ್ಲಿ ಉಳಿದ ಮಾಡ್ಯೂಲ್‌ಗಳನ್ನು ಪೂರೈಸುವುದು ಸಾಧ್ಯವಾಗಿಲ್ಲ.
ಇಲಾಖೆಯು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ, ತಾಂತ್ರಿಕ ಸಂಪನ್ಮೂಲಗಳನ್ನು ಹೆಚ್ಚಿಸುವಂತೆ ಕೋರಿದ್ದರೂ, ಉದ್ದೇಶಿತ ಫಲಿತಾಂಶ ಸಾಧ್ಯವಾಗಿಲ್ಲ. ಇದರಿಂದ ಕಳೆದ ಒಂದು ತಿಂಗಳಿನಿಂದ ಇ-ಖಾತಾ ಪ್ರಕ್ರಿಯೆ ಸಮರ್ಪಕವಾಗಿ ನಡೆಯದೆ, ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ.
ಅಗತ್ಯ ತಾಂತ್ರಿಕ ತಿದ್ದುಪಡಿಗಳನ್ನು ಮಾಡುವುದು, ಬಾಕಿ ಇರುವ ಮಾಡ್ಯೂಲ್‌ಗಳನ್ನು ಕೂಡಲೇ ಪೂರೈಸುವುದು, ಒಪ್ಪಿತ ಕಾಲಮಿತಿಯ ಗಡುವಿನಲ್ಲಿ ಬದಲಾವಣೆ ಸೇರಿದಂತೆ ಇ-ಸ್ವತ್ತು ಅರ್ಜಿ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಲು ಖುದ್ದು ಮಧ್ಯಪ್ರವೇಶಿಸಿ, ಸಂಬಂಧಿತ ತಂಡಕ್ಕೆ ಸೂಚನೆಗಳನ್ನು ನೀಡುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದೇನ ಎಂದು
ಮಾಹಿತಿ ನೀಡಿದ್ದಾರೆ.





Leave a comment