Home ಕ್ರೈಂ ನ್ಯೂಸ್ ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!

Share
Share

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು ರಾಜ್ಯ ಕಂಡಿಲ್ಲ. ಜನರ ಜೀವ, ಆಸ್ತಿ ಮತ್ತು ಗೌರವವನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ಇಂದು ಸುದ್ದಿಯಾಗುತ್ತಿರುವುದು ಅಪರಾಧಿಗಳನ್ನು ಹಿಡಿದಿದ್ದಕ್ಕಾಗಿ ಅಲ್ಲ – ಅಧಿಕಾರಿಗಳೇ ಕಾನೂನು ಮುರಿದ, ನಗೆಪಾಟಲಿಗೀಡಾದ ಘಟನೆಗಳಿಗಾಗಿ ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರು ಕಚೇರಿಯೊಳಗೇ ಅಸಭ್ಯ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಹೊರಬಿದ್ದಿರುವುದು, ವಿಡಿಯೋಗಳು ವೈರಲ್ ಆಗಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸ್ ಇಲಾಖೆ ನೈತಿಕವಾಗಿ ಎಷ್ಟು ಅಧಃಪತನವಾಗಿದೆ ಎನ್ನುವುದಕ್ಕೆ ಜೀವಂತ ಸಾಕ್ಷಿ. ಇದು ಕೇವಲ ಒಬ್ಬ ಅಧಿಕಾರಿಯ ವೈಯಕ್ತಿಕ ತಪ್ಪಲ್ಲ – ಇಡೀ ಪೊಲೀಸ್ ವ್ಯವಸ್ಥೆಯ ನೈತಿಕ ಪತನದ ನಿದರ್ಶನ ಎಂದು ಕಿಡಿಕಾರಿದ್ದಾರೆ.

ಗೃಹ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಧಿಕಾರಿಯೊಬ್ಬರ ವಿರುದ್ಧ ಅನೇಕ ಗಂಭೀರ ಆರೋಪಗಳಿದ್ದರೂ ಯಾವುದೇ ಕಠಿಣ ಕ್ರಮ ಇಲ್ಲದಿರುವುದು ಸರ್ಕಾರ ಈ ರೀತಿಯ ವರ್ತನೆಗೆ ಪರೋಕ್ಷ ರಕ್ಷಣೆ ನೀಡುತ್ತಿದೆಯೇ ಎಂಬ ಅನುಮಾನ ಸಹಜವಾಗಿ ಮೂಡುತ್ತಿದೆ. ಶಿಸ್ತಿನ ಇಲಾಖೆಯ ಗೌರವ ಸಾರ್ವಜನಿಕರ ಮುಂದೆ ಮಣ್ಣಾಗುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿಕೊಂಡಿರುವುದು ಅಸಹ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಪೊಲೀಸ್ ಇಲಾಖೆಯೊಳಗಿನ ಅಶಿಸ್ತು ಮತ್ತು ಅನಾಚಾರ, ಮತ್ತೊಂದೆಡೆ ಅಪರಾಧಿಗಳ ರಾಜಾರೋಷ. ಪೊಲೀಸ್ ಕಮಿಷನರ್ ಕಚೇರಿಯ ಮೂಗಿನ ಕೆಳಗೇ ಹಣ ಲೂಟಿ ಆಗುತ್ತದೆ ಎಂದರೆ, ಸಾಮಾನ್ಯ ನಾಗರಿಕನ ಸುರಕ್ಷತೆಗೆ ಯಾವ ಭರವಸೆ ಉಳಿದಿದೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಎಟಿಎಂ ಲೂಟಿ, ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಪತ್ತೆ ಕಾರ್ಯದಲ್ಲಿ ಇಲಾಖೆ ನಿರಂತರವಾಗಿ ವಿಫಲವಾಗುತ್ತಿದೆ. ಪೊಲೀಸರ ಗಮನ ಅಪರಾಧಿಗಳ ಮೇಲೆ ಇದೆಯೋ, ಅಥವಾ ರಾಜಕೀಯ ಒತ್ತಡ ಮತ್ತು “ಕಲೆಕ್ಷನ್ ವ್ಯವಸ್ಥೆ” ಮೇಲೆಯೋ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ ಎಂದಿದ್ದಾರೆ.

ಇಂದು ಡ್ರಗ್ಸ್ ಜಾಲ ಹಳ್ಳಿಗಳವರೆಗೂ ವಿಸ್ತರಿಸಿದೆ. ಶಾಲಾ–ಕಾಲೇಜುಗಳ ಸುತ್ತ ಗಾಂಜಾ, ಮಾದಕ ವಸ್ತುಗಳ ವ್ಯಾಪಾರ ನಡೆಯುತ್ತಿದ್ದರೂ, ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರತಿಯೊಂದು ಪ್ರಶ್ನೆಗೆ “ತನಿಖೆ ನಡೆಯುತ್ತಿದೆ”, “ನನಗೆ ಗೊತ್ತಿಲ್ಲ” ಎಂಬ ಉತ್ತರ ಮಾತ್ರ. ರಾಜ್ಯದಲ್ಲಿನ ಡ್ರಗ್ಸ್ ದಂಧೆ ಪತ್ತೆ ಹಚ್ಚಲು ಅನ್ಯರಾಜ್ಯದ ಪೊಲೀಸರು ಬರಬೇಕಾಗಿರುವುದು ನಾಚಿಕೆಗೇಡು. ಪರಿಸ್ಥಿತಿ ಹೀಗೆ ಮುಂದುವರೆದರೆ ಕರ್ನಾಟಕದ ಒಂದು ತಲೆಮಾರು ಮಾದಕ ವಸ್ತುಗಳ ನಶೆಗೆ ಬಲಿಯಾಗುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಜಿ. ಪರಮೇಶ್ವರ ಅವರೇ, ನಿಮ್ಮ ಇಲಾಖೆಯ ಅಧಿಕಾರಿಗಳು ಕಚೇರಿಯೊಳಗೇ ಅನಾಚಾರ ಎಸಗುತ್ತಿದ್ದರೂ ನೀವು ಮೌನವಾಗಿರುವುದು, ಇಲಾಖೆಯ ನಿಮ್ಮ ಹಿಡಿತದ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗೃಹ ಇಲಾಖೆಯ ಮೇಲೆ ತಮಗೆ ಆಸಕ್ತಿ ನಿಯಂತ್ರಣವೇ ಇಲ್ಲದಿದ್ದರೆ, ಆ ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳುವ ನೈತಿಕ ಹಕ್ಕು ನಿಮಗಿಲ್ಲ? ಇಂದು ಮಹಿಳೆಯರು, ಯುವಕರು, ಹಿರಿಯ ನಾಗರಿಕರು ಬೀದಿಯಲ್ಲಿ ಸುರಕ್ಷಿತವಾಗಿಲ್ಲವೆಂಬ ಭಾವನೆ ಹೊಂದಿದ್ದರೆ, ಅದಕ್ಕೆ ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತವೇ ಕಾರಣ ಎಂದು ಆರೋಪಿಸಿದ್ದಾರೆ.

ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ “ಬಿ–ಟೀಮ್” ಆಗಿ ಬಳಸುತ್ತಿದೆಯೇ? ಜನಸಾಮಾನ್ಯರಿಗೆ ನ್ಯಾಯ ಸಿಗದ ಈ ವ್ಯವಸ್ಥೆಗೆ ಯಾರು ಹೊಣೆ? ಇದು ಇಂದು ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆಗಳು. ಸಿಎಂ ಸಿದ್ದರಾಮಯ್ಯನವರೇ ಗೃಹ ಇಲಾಖೆ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ಅಸಮರ್ಥ ಗೃಹ ಸಚಿವರ ರಾಜೀನಾಮೆ ಪಡೆಯಿರಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಜನರ ಸುರಕ್ಷತೆಯೊಂದಿಗೆ ಆಟವಾಡಬೇಡಿ. ಕಾನೂನು ಸುವ್ಯವಸ್ಥೆಗೆ ಕಳಂಕ ಬಂದರೆ ರಾಜ್ಯದ ವರ್ಚಸ್ಸು, ಆರ್ಥಿಕ ವ್ಯವಸ್ಥೆ, ಹೂಡಿಕೆ, ಕೈಗಾರಿಕೋದ್ಯಮ, ಉದ್ಯೋಗ ಸೃಷ್ಟಿ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನ
ಗಂಭೀರವಾಗಿ ಪರಿಗಣಿಸಿ ಗೃಹ ಸಚಿವರನ್ನು ಬದಲಿಸಿ ಎಂದು ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *