ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಬಣವೇ ಇಲ್ಲ. ಬಡಿದಾಟ ಎಲ್ಲಿದೆ? ಸಣ್ಣಪುಟ್ಟ ಸಮಸ್ಯೆಗಳಿದ್ದವು. ಅವುಗಳನ್ನು ಪರಿಹರಿಸಿಕೊಂಡಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಸ್ಪಷ್ಟನೆ ನೀಡಿದ್ದಾರೆ.
READ ALSO THIS STORY: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ನಮ್ಮ ಕುಟುಂಬದವರ್ಯಾರು ಸ್ಪರ್ಧಿಸಲ್ಲ: ಜಿ. ಎಂ. ಸಿದ್ದೇಶ್ವರ ಘೋಷಣೆ!
ಜಿಎಂಐಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಬಿಜೆಪಿಯಲ್ಲಿ ಬಣ ಬಡಿದಾಟ ನಡೆಯುತ್ತಿದೆ ಎಂಬುದು ಸರಿಯಲ್ಲ. ಸಣ್ಣ ಪುಟ್ಟ ವ್ಯತ್ಯಾಸಗಳಿದ್ದವು. ಕುಳಿತು ಬಗೆಹರಿಸಿಕೊಂಡಿದ್ದೇವೆ. ಸಮಸ್ಯೆಯೂ ಬಗೆಹರಿದಿದೆ. ನಾವೆಲ್ಲರೂ ಒಟ್ಟಾಗಿದ್ದೇವೆ, ಹೋರಾಟ ಮಾಡುತ್ತೇವೆ. ಭಿನ್ನಮತ, ಭಿನ್ನಾಭಿಪ್ರಾಯ ಎಂದೇನಿಲ್ಲ. ಎಲ್ಲಾ ಪಕ್ಷಗಳಲ್ಲಿಯೂ ಸಣ್ಣ ಪುಟ್ಟ ಸಮಸ್ಯೆಗಳಿರುತ್ತವೆ. ನಮ್ಮಲ್ಲೂ ಇದೆ ಎಂದು ಹೇಳಿದರು.
ನಾನು ಎಲ್ಲಿಯಾದರೂ ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ವಿರುದ್ಧ ಮಾತನಾಡಿದ್ದೇನೆಯೇ? ಇಲ್ಲವಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರನ್ನು 2028ರವರೆಗೆ ಮುಂದುವರಿಸಲು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದೆಯಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿ.ಎಂ. ಸಿದ್ದೇಶ್ವರ ಅವರು, ನಾನು ದೆಹಲಿಗೆ ಹೋಗುತ್ತೇನೆ. ಅಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರನ್ನು ಭೇಟಿ ಮಾಡುತ್ತೇನೆ. ಅವರ ಜೊತೆ ಚರ್ಚಿಸಿದ ಬಳಿಕ ಈ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಬಿಜೆಪಿಗೆ ಮರಳುವ ಕುರಿತಂತೆ ಬಹಿರಂಗವಾಗಿಯೇ ಹೇಳಿದ್ದಾರೆ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈಶ್ವರಪ್ಪರು ಹಿರಿಯರು. ಪಕ್ಷಕ್ಕಾಗಿ ದುಡಿದಿದ್ದಾರೆ. ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟಿದ್ದರು. ಮತ್ತೆ ಬಂದರೆ ಸ್ವಾಗತ ಎಂದು ಜಿ. ಎಂ. ಸಿದ್ದೇಶ್ವರ ಹೇಳಿದ್ದಾರೆ.





Leave a comment