ದಾವಣಗೆರೆ: ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಂದಣಿ ಮಾಡಿಕೊಂಡು ಸರ್ಕಾರ ನಿಗದಿಪಡಿಸಿದ ಮೆಕ್ಕೆಜೋಳ ಖರೀದಿಸಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಖರೀದಿ ಕೇಂದ್ರದ ಅಧಿಕಾರಿ, ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ನಗರ ಸಮೀಪದ ಆವರಗೆರೆ ಗ್ರಾಮದ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಕೇಂದ್ರದಲ್ಲಿ ಸ್ಥಾಪಿಸಿರುವ ಮೆಕ್ಕೆಜೋಳ ಖರೀದಿ ನೋಂದಣಿ ಕೇಂದ್ರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಎಪಿಎಂಸಿ ಮಾರುಕಟ್ಟೆ ಆವರಣ ಮತ್ತು ಆವರಗೆರೆ ಗ್ರಾಮದಲ್ಲಿ ನೋಂದಣಿ ಕೇಂದ್ರ ಸ್ಥಾಪಿಸಿದ್ದು, ರೈತರು ಈ ಎರಡು ಕೇಂದ್ರಗಳಲ್ಲಿ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸಿದ ಬಳಿಕ ರಸೀದಿ ಪಡೆಯಬೇಕು. ರೈತರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಇನ್ನು ಎರಡು ನೋಂದಣಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಸರ್ಕಾರದ ಆದೇಶದನ್ವಯ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಮೆಕ್ಕೆಜೋಳವನ್ನು ಎಪಿಎಂಸಿ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಧಾರಣೆಯ ಆಧಾರದ ಮೇಲೆ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತವನ್ನು ಡಿಬಿಟಿ ಮುಖಾಂತರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ ಎಂದು ತಿಳಿಸಿದರು.
ಮಾರುಕಟ್ಟೆ ಮಧ್ಯ ಪ್ರವೇಶದ ದರ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 2150 ರೂ. ನಿಗದಿಪಡಿಸಿದೆ. ಪ್ರತಿ ಎಕರೆಗೆ 12 ಕ್ವಿಂಟಾಲ್ ನಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಗರಿಷ್ಠ 50 ಕ್ವಿಂಟಾಲ್‌ಗೆ ಮಿತಿಗೊಳಿಸಲಾಗಿದೆ. ಫ್ರೂಟ್ ತಂತ್ರಾಂಶದಲ್ಲಿ 12 ಕ್ವಿಂಟಾಲ್ ತೆಗೆದು 14 ಕ್ವಿಂಟಾಲ್ ಸೇರಿಸಲು ದೂರವಾಣಿ ಮೂಲಕ ಸಂಬಂಧಪಟ್ಟ ನಿರ್ದೇಶಕರಿಗೆ ಸೂಚನೆ ನೀಡಿದರು.
ನೋಂದಣಿ ಪ್ರಕ್ರಿಯೆ ಮುಗಿದ ಬಳಿಕ ರೈತರು ಅಧಿಕಾರಿಗಳು ಸೂಚಿಸಿದ ಸ್ಥಳಕ್ಕೆ ಮೆಕ್ಕೆಜೋಳ ತಂದು ಹಾಕಬೇಕು. ಮೆಕ್ಕೆಜೋಳ ದರ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ನೋಂದಣಿ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ನೋಂದಣಿ ಆರಂಭಿಸಲಾಗಿದೆ. ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ರಾಜ್ಯಾಧ್ಯಕ್ಷ ಹುಚ್ಚವ್ವಹಳ್ಳಿ ಮಂಜುನಾಥ್, ಮಾರ್ಕೆಟಿಂಗ್ ಮ್ಯಾನೇಜರ್ ಸೈಯದ್, ರೈತರು ಪಾಲ್ಗೊಂಡಿದ್ದರು.





Leave a comment