Home ದಾವಣಗೆರೆ ಒಂದು ವಾರದಿಂದ ಭದ್ರಾ ಡ್ಯಾಂನಿಂದ ನೀರು ಹರಿಸುತ್ತಿದ್ದರೂ ಕಾಲುವೆಗಳಿಗೆ ಬಂದಿಲ್ಲ ನೀರು!
ದಾವಣಗೆರೆಬೆಂಗಳೂರು

ಒಂದು ವಾರದಿಂದ ಭದ್ರಾ ಡ್ಯಾಂನಿಂದ ನೀರು ಹರಿಸುತ್ತಿದ್ದರೂ ಕಾಲುವೆಗಳಿಗೆ ಬಂದಿಲ್ಲ ನೀರು!

Share
ಭದ್ರಾ ಡ್ಯಾಂ
Share

ದಾವಣಗೆರೆ: ಭದ್ರಾ  ಡ್ಯಾಂನಿಂದ ನೀರು ಹರಿಸಲು ಪ್ರಾರಂಭಿಸಿ ಒಂದು ವಾರ ಕಳೆದರೂ ಕಾಲುವೆಗಳಲ್ಲಿ ನೀರು ಬಂದಿಲ್ಲ. ಕೂಡಲೇ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾವು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿತು.

READ ALSO THIS STORY: ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು: ಜಿ. ಬಿ. ವಿನಯ್ ಕುಮಾರ್

ಭದ್ರಾ ನೀರು ಕಾಲುವೆಗಳಿಗೆ ಹರಿಸಲು ಪ್ರಾರಂಭಿಸಿ ಒಂದು ವಾರ ಕಳೆದರೂ ಎಲ್ಲಿಯೂ ಕಾಲುವೆಗಳಲ್ಲಿ ನೀರು ಕಾಣಿಸುತ್ತಿಲ್ಲ. ತೋಟದ ಬಹು ವಾರ್ಷಿಕ ಬೆಳೆಗಳಿಗೆ ನೀರುಣಿಸದೆ 2 ತಿಂಗಳಾಗಿರುವುದರಿಂದ ಒಣಗುತ್ತಿವೆ. ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯಲು ಸಸಿ ಮಡಿಯಲ್ಲಿ ನಾಟಿಗೆ ಸಸಿಗಳು ಬೆಳೆದು ನಿಂತಿವೆ. ರೊಳೆ ಹೊಡೆಯಲು ನೀರು ಬೇಕು. ಸ್ವಂತ ಕೊಳವೆ ಬಾವಿ ಅಥವಾ ಕೆರೆಕಟ್ಟೆಯ ನೀರಿನ ಸೌಲಭ್ಯ ಇಲ್ಲದ ರೈತರು ಕಾಲುವೆಗಳಲ್ಲಿ ನೀರು ಹರಿದು ಬಂದ ನಂತರ ಭತ್ತದ ಬೀಜ ಚೆಲ್ಲಲು ಚಾತಕ ಪಕ್ಷಿಯಂತೆ ನೀರಿಗಾಗಿ ಕಾಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇವೆಲ್ಲ ಸಮಸ್ಯೆಗಳ ಅರಿತಿದ್ದ ಬಿಜೆಪಿ ರೈತ ಮೋರ್ಚಾ ಜನವರಿ 1 ರಿಂದಲೇ ಕಾಲುವೆಗಳಲ್ಲಿ ನೀರು ಹರಿಸಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜನವರಿ 8 ರಿಂದ ನೀರು ಹರಿಸುವುದಾಗಿ ನಿರ್ಣಯಿಸಲಾಯಿತು. ಆದರೆ ಇಂದಿಗೆ ನೀರು ಹರಿಸಲು ಪ್ರಾರಂಭಿಸಿ ಒಂದು ವಾರ ಕಳೆದರೂ ಕಾಲುವೆಗಳಲ್ಲಿ ನೀರು ಹರಿದು ಬಂದಿಲ್ಲ. ಎಲ್ಲಿ ನೋಡಿದರೂ ಬರಿ ಒಣಗಿರುವ ಕಾಲುವೆಗಳು ಕಾಣಿಸುತ್ತವೆ. ಕಳೆದ ಹಂಗಾಮಿನಲ್ಲಿ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸಮೃದ್ಧವಾಗಿ ಸುರಿದು, ಜಲಾಶಯ ಭರ್ತಿಯಾಗಿ ತುಂಬಿದೆ. ಆದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ನೀರು ಹರಿಸಲು ಮೀನಮೇಷ ಎಣಿಸುತ್ತಿದ್ದಾರೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಆಗಿದೆ ಎಂದು ದೂರಲಾಗಿದೆ.

ರೈತರ ಬೇಡಿಕೆಗಳೇನು?

ತಕ್ಷಣ ಕಾಲುವೆಗಳಲ್ಲಿ ನೀರು ಹರಿಸಿ, ಒಣಗುತ್ತಿರುವ ತೋಟದ ಬೆಳೆಗಳನ್ನು ಉಳಿಸಬೇಕು ಮತ್ತು ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯಲು ಅನುವು ಮಾಡಿಕೊಡಬೇಕು.

ಕಾಲುವೆಗಳಲ್ಲಿ ಗಿಡ ಗಂಟೆಗಳು ಬೆಳೆದು ನೀರು ಸರಾಗವಾಗಿ ಹರಿಯುತ್ತಿಲ್ಲ. ಆದ್ದರಿಂದ ಆಗಿಂದಾಗ್ಗೆ VB-G RAM-G ಯೋಜನೆಯಡಿ ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಸಿ, ಸ್ವಚ್ಛ ಮಾಡಿಸಿ ಹೂಳು ಎತ್ತಿಸಿ, ನೀರು ಸರಾಗವಾಗಿ ಕೊನೆ ಭಾಗಕ್ಕೆ ತಲುಪುವಂತೆ ಮಾಡಲು ಕ್ರಮ ವಹಿಸಬೇಕು.

ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಶೇಕಡ 70 ರಷ್ಟು ಇರುವುದರಿಂದ ಮುಂದಿನ ನೀರಾವರಿ ಸಲಹಾ ಸಮಿತಿ ಸಭೆ ದಾವಣಗೆರೆಯಲ್ಲಿ ನಡೆಯಬೇಕು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಿಯೋಗದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ವಕ್ತಾರ ಹಾಗೂ ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್, ದಾವಣಗೆರೆ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಾರೇಶನಾಯ್ಕ, ಪ್ರಧಾನ ಕಾರ್ಯದರ್ಶಿ ಡಿ.ವಿ. ಜಯರುದ್ರಪ್ಪ, ರೈತ ಮುಖಂಡರಾದ ಕಾಡಜ್ಜಿ ಬಸವರಾಜು, ಹಾಲೇಶ ನಾಯಕ, ವಾಟರ್ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *