ಬೆಂಗಳೂರು: ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಮಹಾತ್ಮ ಗಾಂಧಿ ಅವರ ಮೇಲಿರುವ ದ್ವೇಷಕ್ಕೆ ಯೋಜನೆಯ ಹೆಸರನ್ನು ಬದಲಿಸಿರುವುದು ಸಾಕ್ಷಿ. ಈ ದ್ವೇಷವು ಗ್ರಾಮೀಣ ಬಡಜನರ ಜೀವನೋಪಾಯಕ್ಕೆ ಕೊಳ್ಳಿ ಇಡುವಂತೆ ಅವರನ್ನು ಪ್ರೇರೇಪಿಸಿರುವುದು ನೋವಿನ ಸಂಗತಿ. ಗ್ರಾಮೀಣ ಜನರ ಉದ್ಯೋಗ ಕಸಿಯುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಪಕ್ಷ, ಸಿದ್ಧಾಂತ, ವರ್ಗ ಭೇದಗಳನ್ನು ಮರೆತು ದನಿ ಎತ್ತಬೇಕಿದೆ. ಕರಾಳ ಕಾಯ್ದೆಯ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಸಂಗ್ರಾಮ’ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ದೇಶದ ಜನರಿಗೆ ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಅರಣ್ಯ ವಾಸಿಗಳ ಹಕ್ಕು ಮುಂತಾದ ಜನಪರ ಕಾಯ್ದೆಗಳನ್ನು ರೂಪಿಸಿದೆ. 20 ವರ್ಷಗಳಿಂದ ಜಾರಿಯಲ್ಲಿದ್ದ ಉದ್ಯೋಗ ಖಾತ್ರಿಯು ದೇಶಾದ್ಯಂತ 12.16 ಕೋಟಿ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. 6.21 ಕೋಟಿ ಮಹಿಳೆಯರಿಗೆ ಇದು ಉದ್ಯೋಗದ ಗ್ಯಾರಂಟಿ ನೀಡಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರವು ಕರಾಳ ಕಾಯ್ದೆ ಮೂಲಕ ಈ ಬಡ ಕಾರ್ಮಿಕರ ಮೇಲೆ ಪ್ರಹಾರ ನಡೆಸಲು ಮುಂದಾಗಿದೆ
ಎಂದು ವಾಗ್ದಾಳಿ ನಡೆಸಿದರು.
ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, ವಿಬಿ-ಗ್ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸುವವರೆಗೂ ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವ ಅವಶ್ಯಕತೆ ಇದೆ. ಇದು ನರೇಗಾವನ್ನು ಆಶ್ರಯಿಸಿರುವ ಕೂಲಿ ಕಾರ್ಮಿಕರಿಗೆ ಮಾತ್ರವಲ್ಲ, ಇಡೀ ಗ್ರಾಮದ ಸಮಗ್ರ ಅಭಿವೃದ್ಧಿಗೆ, ಆರ್ಥಿಕ ಪ್ರಗತಿಗೆ ಮತ್ತು ಗ್ರಾಮ ಪಂಚಾಯತಿಗಳ ಅಧಿಕಾರಕ್ಕೆ ಮಾರಕವಾಗಲಿದೆ. ಗ್ರಾಮೀಣ ಜನರಿಗೆ ಹಾಗೂ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಸಂಕಷ್ಟದ ಹೊರೆ ಹೆಚ್ಚಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರವು ನರೇಗಾ ಬಚಾವೊ ಆಂದೋಲನವನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ನಮ್ಮ ಜನರ ಉದ್ಯೋಗದ ಹಕ್ಕನ್ನು ಸಾಂವಿಧಾನಬದ್ಧ ಮತ್ತು ಸಂಘಟಿತ ಹೋರಾಟದಿಂದ ಮರಳಿ ಪಡೆಯೋಣ ಎಂದು ಹೇಳಿದರು.





Leave a comment