ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡರೊಬ್ಬರು ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗನೂರು ಬಳಿಯ ಬಿಸ್ಲೇರಿ ಜಮೀನಿನಲ್ಲಿ ನಡೆದಿದೆ.
READ ALSO THIS STORY: BIG BREAKING: ‘ಕೊರಳಪಟ್ಟಿ ಹಿಡಿದು ಕೇಳ್ತೇನೆಂದಿದ್ದ” ಹೆಚ್. ಬಿ. ಮಂಜಪ್ಪ ವಿರುದ್ಧ ಪೊಲೀಸ್ ಮಹಾನಿರ್ದೇಶಕರಿಗೆ ಎಂ. ಪಿ. ರೇಣುಕಾಚಾರ್ಯ ದೂರು!
ತಂದೆ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಪುತ್ರಿ ಮನೆಯಲ್ಲೇ ನೇಣಿಗೆ ಕೊರಳಡ್ಡಿ ಆತ್ಮಹತ್ಯೆಗೆ ಯತ್ನಿಸಿದರೆ, ವಿಷ ಸೇವಿಸಿದ್ದ ಪುತ್ರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಚಂದ್ರಶೇಖರ್ ಸಂಕೋಳ್ (56) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ದಾವಣಗೆರೆ ತಾಲೂಕಿನ ಬಿಸ್ಲೇರಿ ಬಳಿಯ ತನ್ನ ಜಮೀನಿನಲ್ಲಿ ಕಾರಿನಲ್ಲಿ ಹೋಗಿದ್ದಾರೆ. ಅಲ್ಲಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಚಂದ್ರಶೇಖರ್ ಸಂಕೋಳ್ ಸಜೀವ ದಹನವಾಗಿದ್ದಾರೆ.
ತಂದೆ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಪುತ್ರಿಯೂ ನೇಣಿಗೆ ಕೊರಳಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದು, ಪುತ್ರನೂ ವಿಷ ಕುಡಿದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ.
ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿ ಇಟ್ಟುಕೊಂಡಿದ್ದ ಶಾಮನೂರು ಗ್ರಾಮದ ಚಂದ್ರಶೇಖರ್ ಸಂಕೊಳ್ ಅವರು ಬಿಜೆಪಿ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಬಿಸ್ಲೇರಿ ಸೇರಿದಂತೆ ಶಾಮನೂರಿನಲ್ಲಿ ಆಸ್ತಿ ಹೊಂದಿದ್ದರು. 2007ರಲ್ಲಿ ಶಾಮನೂರು ಸಾಮಾನ್ಯ ಕ್ಷೇತ್ರದಿಂದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. ಮಾತ್ರವಲ್ಲ, ಜನಪ್ರಿಯ ಜನನಾಯಕ ಎಂಬ ಖ್ಯಾತಿಯನ್ನೂ ಗಳಿಸಿದ್ದರು.
ಶಾಮನೂರಿನ ಸಂಕೊಳ್ಳ್ ಶಿವಪ್ಪರ ಪುತ್ರರಾಗಿದ್ದ ಚಂದ್ರಶೇಖರ್ ಸಂಕೊಳ್ ಅವರು ಸಾಮಾಜಿಕ ಕಾರ್ಯಗಳ ಮೂಲಕ ಜನಪ್ರಿಯರಾಗಿದ್ದರು. ಶಾಮನೂರು ಆಂಜನೇಯ ದೇವಸ್ಥಾನದ ಟ್ರಸ್ಟಿಗಳೂ ಆಗಿದ್ದರು.
ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಸಿದ್ದ ಚಂದ್ರಶೇಖರ್:
2017ರಲ್ಲಿ ದಾವಣಗೆರೆ ನಗರದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಆಗ ನಾಗರೀಕರು ಪರದಾಡುತ್ತಿದ್ದರು. ಆಗ ಅನುಕೂಲರವಾಗಲೆಂದು ಆಗ ದಾವಣಗೆರೆ ಬಿಜೆಪಿ ಉಪಾಧ್ಯಕ್ಷರಾಗಿದ್ದ ಚಂದ್ರಶೇಖರ್ ಸಂಕೋಳ್ ಅವರು ಶಾಮನೂರು
ಬಳಿ ಇರುವ ಸಂಕೋಳ್ ಶಿವಪ್ಪ ಬಡಾವಣೆಯಲ್ಲಿ ಟ್ಯಾಂಕರ್ ಗಳ ಮೂಲಕ ಉಚಿತ ನೀರು ಪೂರೈಸಿ ಜನರ ಸಂಕಷ್ಟಕ್ಕೆ ನೆರವಾಗಿದ್ದರು.
ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿತ್ತು. ಜನರಿಗೆ ಅನುಕೂಲವಾಗಲೆಂದು ಉಚಿತವಾಗಿ ನೀರನ್ನು ಪೂರೈಸುವ ಮೂಲಕ ಜಲ ತಂದ ಭಗೀರಥ ಎನಿಸಿಕೊಂಡಿದ್ದ ಚಂದ್ರಶೇಖರ ಸಂಕೊಳ್ ಅವರು ಮಹಾನಗರ ಪಾಲಿಕೆ ಟ್ಯಾಂಕರ್ ಗಳನ್ನು ಬಳಸಿಕೊಂಡು ಬೆಳಗ್ಗೆ 6 ರಿಂದ ಸಂಜೆಯವರೆಗೂ 300 ಕ್ಕೂ ಹೆಚ್ಚು ಟ್ಯಾಂಕರ್ ಗಳಿಂದ ಬಡಾವಣೆಗಳಿಗೆ ನೀರನ್ನು ಪೂರೈಸುವ ಕೆಲಸ ಮಾಡಿದ್ದರು.
ಜನರಿಗೆ ನೀರು ಪೂರೈಸಲು ಟ್ಯಾಂಕರ್ ಗಳು ಆಗ ಸಿಗುತ್ತಿರಲಿಲ್ಲ. ದರ ದುಬಾರಿಯಾಗಿತ್ತು. ಎಷ್ಟೇ ಹಣ ನೀಡುತ್ತೇವೆ ಎಂದರೂ ಸಕಾಲಕ್ಕೆ ನೀರು ದೊರೆಯುತ್ತಿರಲಿಲ್ಲ. ಬೋರ್ ವೆಲ್ ಗಳಿಂದ ನೀರನ್ನು ತುಂಬಿಸಲು ಒಂದು ಟ್ಯಾಂಕರ್ ಗೆ 50 ರೂ ತೆಗೆದುಕೊಳ್ಳಲಾಗುತಿತ್ತು. ಆದರೆ ಜನರಿಗೆ ಅನುಕೂಲವಾಗಲೆಂದು ಟ್ಯಾಂಕರ್ ಗಳಿಗೆ ಉಚಿತವಾಗಿ ನೀರು ಪೂರೈಸಿ ಸೈ ಎನಿಸಿಕೊಂಡಿದ್ದರು. ಸಾರ್ವಜನಿಕರು ಟ್ಯಾಂಕರ್ ಗಳ ಬಾಡಿಗೆ ಪಾವತಿಸಿ ನೀರು ಪಡೆಯಬಹುದು. ಸ್ವಂತ ಟ್ಯಾಂಕರ್, ಆಟೋ ಇದ್ದವರು ಸಹ ಬಂದು ನೀರನ್ನು ತುಂಬಿಕೊಂಡು ಹೋಗಬಹುದು ಎಂದು ಹೇಳುವ ಮೂಲಕ ಜನರಿಗೆ ನೀರು ನೀಡಿ ಗಮನ ಸೆಳೆದಿದ್ದರು.





Leave a comment