ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ಎದುರಾಗಿದ್ದು, ಈ ಚುನಾವಣೆಯಲ್ಲಿ ಎಸ್. ಎಸ್. ಪುತ್ರ ಎಸ್. ಎಸ್. ಗಣೇಶ್ ಅಭ್ಯರ್ಥಿಯಾಗಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಸ್. ಎ. ರವೀಂದ್ರನಾಥ್ ಅವರು ಹೇಳಿರುವುದು ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
READ ALSO THIS STORY: ಸಹಿ ಹಾಕಿದ್ದ ಬಗ್ಗೆ ಏನನ್ನೂ ಹೇಳಲ್ಲ, ದೀಪ ಹಚ್ಚುವಂತೆ ಕೋರ್ಟ್ ಹೇಳಿದ್ದನ್ನ ಗೌರವಿಸುತ್ತೇವೆ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ ತಾಲೂಕಿನ ನಾಗನೂರು ಗ್ರಾಮದಲ್ಲಿ ಆಯೋಜಿಸಿದ್ದ ದಿವಂಗತ ಶಾಮನೂರು ಶಿವಶಂಕರಪ್ಪನವರಿಗೆ ಭಾವಪೂರ್ಣ ಶ್ರದ್ಧಾಂತಲಿ ಹಾಗೂ ನುಡಿನಮನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪರ ದ್ವಿತೀಯ ಪುತ್ರ ಎಸ್. ಎಸ್. ಗಣೇಶ್ ಅವರು ಸ್ಪರ್ಧೆ ಮಾಡಲಿ. ತಂದೆ ಸಾಧನೆ ಮೇಲೆ ಕಳಶ ಇಡುವ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ. ಇದು ಬಿಜೆಪಿ ನಾಯಕರಿಗೆ ಇರಿಸು ಮುರಿಸು ತಂದಿದೆ.
ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಸ್. ಎಸ್. ಗಣೇಶ್ ಅವರ ಹೆಸರು ಕೇಳಿ ಬರುತ್ತಿದೆ. ಈ ವಿಚಾರ ಮಾಧ್ಯಮಗಳಲ್ಲಿಯೂ ಬಂದಿದೆ. ನಾನ ಸಹ ಎಸ್. ಎಸ್. ಗಣೇಶ್ ಸ್ಪರ್ಧೆ ಮಾಡಲಿ ಎಂದು ಸಲಹೆ ನೀಡುತ್ತೇನೆ. ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಬಿಜೆಪಿ ಪಕ್ಷದಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ. ಎಸ್. ಎಸ್. ಗಣೇಶ್ ಅಭ್ಯರ್ಥಿಯಾದರೆ ಒಳ್ಳೆಯದು ಎಂದು ಎಸ್. ಎ. ರವೀಂದ್ರನಾಥ್ ಹೇಳಿದ್ದಾರೆ.
ಮಾಯಕೊಂಡ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದ ವೇಳೆ ಕಬ್ಬು ಬೆಳೆಗಾರರ ವಿಚಾರದ ಬಗ್ಗೆ ಭೇಟಿ ಮಾಡಿದಾಗ ತಮಗೆ ಸೀಟು ಬಿಟ್ಟುಕೊಡುವಂತೆ ಎಸ್. ಎಸ್. ಗಣೇಶ್ ಕೇಳಿದ್ದರು. ಆಗ ನಾನು ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ. ಆದರೆ ಜನರು ಕ್ಷೇತ್ರ ಬಿಟ್ಟು ಕೊಡಬೇಕಲ್ವಾ ಎಂದು ಹೇಳಿದ್ದೆ. ರೂಪಾಯಿ ರೂಪಾಯಿ ಎಂದುಕೊಂಡು ಬಂದಿದ್ದ ಗಣೇಶ್ ಈಗಲಾದರೂ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿ. ಈ ಬಾರಿ ಅವಕಾಶ ಇದೆ ಎಂದು ಎಸ್. ಎ. ರವೀಂದ್ರನಾಥ್ ಮಾತನಾಡಿದ್ದಾರೆ. ಇದು ಬಿಜೆಪಿ ನಾಯಕರೇ ಬೇರೆ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಿರುವುದು ಕಳವಳ ತಂದಿದೆಯಷ್ಟೇ ಅಲ್ಲ, ಸ್ಪರ್ಧೆ ಮಾಡಲಿ ಎಂದು ಹೇಳಿರುವುದು ಅಚ್ಚರಿಗೂ ಕಾರಣವಾಗಿದೆ.





Leave a comment