SUDDIKSHANA KANNADA NEWS/ DAVANAGERE/ DATE:01-09-2024
ದಾವಣಗೆರೆ: ಜಗಳೂರು ತಾಲೂಕಿನಲ್ಲಿ 57 ಕೆರೆ ತುಂಬಿಸುವ ಯೋಜನೆಯಡಿ ನೀರು ಪಡೆದಿರುವ ಪ್ರತಿಯೊಬ್ಬರೂ ಮನೆಯಲ್ಲಿ ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ, ಶಿವಮೂರ್ತಿ ಶಿವಾಚಾರ್ಯರ ಫೋಟೋ ಇಟ್ಟು ಪೂಜೆ ಮಾಡಬೇಕು. ಎಷ್ಟೇ ಹಣ ಖರ್ಚಾದರೂ ಶ್ರೀಗಳ ಭಾವಚಿತ್ರ ಮಾಡಿಸಿಕೊಡುತ್ತೇನೆ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಘೋಷಿಸಿದರು.
ಜಗಳೂರು ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಸಿರಿಗೆರೆ ಶ್ರೀಗಳು ಕೆರೆವೀಕ್ಷಣೆ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಷ್ಟೇ ಸಾವಿರ ಫೋಟೋಗಳು ಬೇಕಾಗಲಿ, ಅದಕ್ಕೆ ನಾನು ನೆರವು ನೀಡುತ್ತೇನೆ. ಶ್ರೀಗಳ ಭಗೀರಥ ಪ್ರಯತ್ನದಿಂದ ತಾಲೂಕಿನ ರೈತರಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ ಎಂದು ತಿಳಿಸಿದರು.
ಶಾಸಕರ ಮೇಲೆ ಒತ್ತಡ ಹೇರಿ ತುಂಗಾ ಮತ್ತು ಭದ್ರಾ ನದಿ ನೀರು ಸಿಗುವಂತೆ ಮಾಡಿದ ಗುರುಗಳ ಪರಿಶ್ರಮ, ಆಶೀರ್ವಾದವೇ ಕಾರಣ. ತಾಲೂಕಿನಲ್ಲಿ ರೈತರು ನೀರಾವರಿ ಸೌಲಭ್ಯ ಕಲ್ಪಿಸುವಂತೆ ಮಾಡಿದ ಸಿರಿಗೆರೆ ಗುರುಗಳನ್ನು ಪೂಜಿಸಬೇಕು
ಎಂದು ಕರೆ ನೀಡಿದರು.
57 ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ಅಳವಡಿಸುವ ಕಾರ್ಯ ಮುಗಿಯುವ ಹಂತ ತಲುಪಿದೆ. ಈಗಾಗಾಲೇ 31ಕೆರೆಗಳಿಗೆ ತುಂಗೆ ಭದ್ರೆ ಹರಿದಿದ್ದಾಳೆ.ಇನ್ನು ಒಂದು ವಾರದಲ್ಲಿ ತಾಲೂಕಿನ 40 ಕೆರೆಗಳಿಗೆ ನೀರು ಬರಲಿದೆ. ಇದಕ್ಕೆ ಸಿರಿಗೆರೆ ಶ್ರೀಗಳ ದೂರದೃಷ್ಟಿತ್ವ, ಪ್ರಾಮಾಣಿಕ ಪ್ರಯತ್ನ, ರೈತರ ಮೇಲಿರುವ ಕಾಳಜಿಯೇ ಕಾರಣ. ಜಗಳೂರು ತಾಲೂಕಿಗೆ ತುಂಗಾ, ಭದ್ರೆ ಹರಿದು ಬಂದ ನಂತರ ಸಿರಿಗೆರೆ ಶ್ರೀಗಳು ಕೆರೆಗಳ ವೀಕ್ಷಣೆ ಹಾಗೂ ಬಾಗೀನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದು, ತಾಲೂಕಿನ ಪ್ರತಿ ಮನೆಯಿಂದಲೂ ಜನರು ಬರಬೇಕು ಎಂದು ಮನವಿ ಮಾಡಿದರು.
57ಕೆರೆ ತುಂಬಿಸುವ ಯೋಜನೆಯಡಿ ಮತ್ತು ವರುಣನ ಕೃಪೆಯಿಂದ ತಾಲೂಕಿನ ಕೆರೆಗಳು ಮೈದುಂಬಿ ಹರಿಯುತ್ತಿವೆ. ಸಿರಿಗೆರೆ ಶ್ರೀಗಳು ಕೆರೆ ವೀಕ್ಷಣೆಗೆ ಆಗಮಿಸಲು ಸಮ್ಮತಿ ನೀಡಿದ್ದಾರೆ. ಮಾಜಿ ಶಾಸಕರು ಹಾಗೂ ಮುಖಂಡರನ್ನೊಳಗೊಂಡ 10 ಜನ ಸಿದ್ದತಾ ಸಮಿತಿ ರಚಿಸಿ ಕೆರೆ ವೀಕ್ಷಣೆ ಕಾರ್ಯಕ್ರಮದ ರೂಪರೇಷೆ ತಯಾರಿಸೋಣ. ಮುಕ್ತಾಯ ಸಮಾರಂಭವನ್ನು ಬಯಲು ರಂಗಮಂದಿರದಲ್ಲಿ ಅದ್ದೂರಿಯಾಗಿ ಆಯೋಜಿಸೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಭಕ್ತ ಸಮೂಹ ಪಾಲ್ಗೊಳ್ಳಬೇಕು. ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಜಲನಿಗಮದಡಿ ರಾಷ್ಟ್ರೀಯ ಯೋಜನೆಗೆ ಸೇರ್ಪಡೆಗೊಂಡಿಲ್ಲ.ಕೇವಲ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ 200ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು.130 ಕೋಟಿ ಹಣ ಬಿಡುಗಡೆಗೊಂಡಿದೆ. ಯೋಜನೆ ಸಾಕಾರಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿ ದೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭರಮಸಾಗರ ಹಾಗೂ ಜಗಳೂರು ಕೆರೆತುಂಬಿಸುವ ಯೋಜನೆಯ ಅವಳಿ ಕೂಸುಗಳು ಜನಿಸಿದ್ದವು. ಮೂವರು ಸಿಎಂಗಳು, ಮೂವರು ಜನ ಶಾಸಕರ ಕಾಳಜಿಯಿಂದ ಯೋಜನೆ ಸಾಕಾರಗೊಂಡು ತಾಲೂಕಿನ ಕೆರೆಗಳಿಗೆ ನೀರು ಹರಿದಿದೆ. .ರಂಗಯ್ಯನದುರ್ಗ ಅರಣ್ಯ ಪ್ರದೇಶದ ಮಾಗಡಿ,ಅಗಸನ ಹಳ್ಳಿ,ಗುರುಸಿದ್ದಾಪುರ ಕೆರೆಗಳಿಗೆ ಇಲಾಖೆಯ ಕಾನೂನು ತೊಡಕಿನಿಂದ ಮತ್ತು ತೊರೆಸಾಲು ಭಾಗದ ಕೆರೆಗಳಿಗೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ಪೈಪ್ ಲೈನ್ ಕಾಮಗಾರಿ ವಿಳಂಬವಾಗಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಕ್ಕೆ ಶಾಸಕರು ಗಮನಹರಿಸಿದ್ದಾರೆ ಎಂದು ತಿಳಿಸಿದರು.
ನೀರಾವರಿ ಇಲಾಖೆ ಎಇಇ ಶ್ರೀಧರ್ ಮಾತನಾಡಿ,2022 ನೇ ಇಸ್ವಿ ಯಲ್ಲಿ ತುಪ್ಪದಹಳ್ಳಿ ಕೆರೆಗೆ,2023 ರಲ್ಲಿ 11 ಕೆರೆಗಳಿಗೆ, 2024 ರಲ್ಲಿ ಒಟ್ಟಾರೆಯಾಗಿ 31ಕೆರೆಗಳಿಗೆ ನೀರುಹರಿಸಲಾಗಿದೆ. ವಾರದೊಳಗೆ 7ಕೆರೆಗಳಿಗೆ ನೀರು ಹರಿಸಲಾಗುವುದು. ಒಟ್ಟು 8ಮೋಟಾರ್ ಗಳಲ್ಲಿ 4 ಮೋಟಾರ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು.ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ಹಂತಹಂತವಾಗಿ ಹೆಚ್ಚುವರಿ ಮೋಟರ್ ಗೆ ಚಾಲನೆ ನೀಡಲಾಗುವುದು.ರೈತರು ಪೈಪ್ ಲೈನ್ ಕಾಮಗಾರಿಗೆ ಸಹಕರಿಸಬೇಕು.ಭದ್ರಾಅಚ್ಚುಕಟ್ಟು ಒಳಹರಿವು ಹೆಚ್ಚಾಗಿದ್ದು ಇನ್ನೂ 2 ರಿಂದ 3 ತಿಂಗಳು ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಮಾಹಿತಿನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ,ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ವಕೀಲ ಕೆ.ಎಂ.ಬಸವರಾಜಪ್ಪ,ಶಿವಣ್ಣಗೌಡ, ಎಂ.ಎಸ್.ಪಾಟೀಲ್, ಓಂಕಾರಪ್ಪ, ಸಿರಿಗೆರೆ ನಾಗರಾಜ್, ಶಶಿಪಾಟೀಲ್, ಲೋಕೇಶ್, ಪರಮೇಶ್ವರಪ್ಪ, ಸುರೇಶ್ ಗೌಡ್ರು, ಪಲ್ಲಾಗಟ್ಟೆ ಶೇಖರಪ್ಪ, ಚಂದ್ರ ನಾಯ್ಕ,ಮಹಮ್ಮದ್ ಗೌಸ್ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.