SUDDIKSHANA KANNADA NEWS/ DAVANAGERE/ DATE:29-08-2024
ದಾವಣಗೆರೆ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಗಳಿಕೆಯಾಗಿದೆ. ದಾವಣಗೆರೆ ಉತ್ತರ ಮಂಡಲದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಮಾಡಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಕರೆ ನೀಡಿದರು.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಾವಣಗೆರೆ ಉತ್ತರ ಮಂಡಲ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಮಾತನಾಡಿದರು.
ದಾವಣಗೆರೆ ಉತ್ತರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ರವರು ಮಾತನಾಡಿ ಕಾರ್ಯಕರ್ತರ ಶ್ರಮವೇ ಪಕ್ಷಕ್ಕೆ ಬುನಾದಿ. ಅವರ ಶ್ರಮದಿಂದ ಪಕ್ಷ ಸಾಕಷ್ಟು ಪ್ರಗತಿ ಕಂಡಿದೆ. ಕಾರ್ಯಕರ್ತರು ಮನಸ್ಸು ಮಾಡಿದರೆ ಪಕ್ಷದ ಹಿರಿಯ ಮುಖಂಡ ಎಸ್ ಎ ರವೀಂದ್ರನಾಥ ರವರು ಹೇಳಿದಂತೆ ರಾಜ್ಯದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ದಾವಣಗೆರೆ ಉತ್ತರ ಮಂಡಲದಲ್ಲಿ ಮಾಡಿಸಬಹುದು ಎಂದು ಹೇಳಿದರು.
ಬಿಜೆಪಿ ಸದಸ್ಯತ್ವ ಅಭಿಯಾನದ ಜಿಲ್ಲಾ ಸಂಚಾಲಕ ಧನಂಜಯ ಕಡ್ಲೆಬಾಳ್ ರವರು ತಮ್ಮ ಮೊಬೈಲ್ ನಿಂದ ಮಿಸ್ ಕಾಲ್ ನೀಡಿ ಸದಸ್ಯತ್ವ ಮಾಡಿಸುವ ವಿವರಣೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ದಾವಣಗೆರೆ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ಬೇತೂರು ಸಂಗನಗೌಡ್ರು ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೇಶ್, ಮುಖಂಡರಾದ ಎಸ್ ಎನ್ ಕಲ್ಲೇಶ್, ಬಸವರಾಜಯ್ಯ, ಕಿಶೋರಕುಮಾರ್, ಉಪ ಮಹಾಪೌರರಾದ ಯಶೋಧ ಹೆಗ್ಗಪ್ಪ ಮುಂತಾದವರು ಉಪಸ್ಥಿತರಿದ್ದರು.