ದಾವಣಗೆರೆ: ರಾಜಕೀಯ ಮುತ್ಸದ್ದಿಯಾಗಿದ್ದ ಜೆ. ಮಹಮ್ಮದ್ ಇಮಾಂ ಅವರ ಅಂತ್ಯ ಕಾಲದಲ್ಲಿ ಪ್ರಸ್ತುತವಾಗಿದ್ದ ರಾಜಕಾರಣಿಗಳ ಕುರಿತು ತರಳಬಾಳು ಜಗದ್ಗುರುಗಳು ನಿಮ್ಮ ಅಭಿಪ್ರಾಯವೇನು ಎಂದು ಇಮಾಂ ಸಾಹೇಬರನ್ನು ಕೇಳಿದ್ದಕ್ಕೆ ‘ ಕ್ಯಾಕರಿಸಿ ಉಗಿಯಬೇಕು’ ಎಂದಿದ್ದರು. ಅಷ್ಟೊಂದು ನೇರ, ನಿಷ್ಟುರ ವ್ಯಕ್ತಿತ್ವ ಅವರದಾಗಿತ್ತು. ಎಂದು ಮಾಜಿ ಶಾಸಕ ವೈಎಸ್ ವಿ ದತ್ತ ನೆನಪು ಮಾಡಿಕೊಂಡರು.
ಜೆ.ಎಂ. ಇಮಾಂ ಸ್ಮಾರಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 7ನೇ ರಾಜ್ಯಮಟ್ಟದ ‘ಜೆ.ಎಂ ಇಮಾಂ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಜೆ.ಮಹಮದ್ ಇಮಾಂ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ :ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದಮುತ್ಸದ್ದಿ ರಾಜಕಾರಣಿ ಇಮಾಂ ಪ್ರಶಸ್ತಿಗೆ ನಾನು ಅರ್ಹನಲ್ಲ ಎಂಬುದು ನನ್ನ ಭಾವನೆ. ಆತ್ಮವಂಚನೆಯಿಂದಲೇ ತಮ್ಮೆಲ್ಲರ ಅಭಿಮಾನದಿಂದ ವಿನಮ್ರತೆಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಅದರಲ್ಲೂ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಂದ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಸೌಭಾಗ್ಯ ಎಂದರು.
ಜೆ.ಮಹಮ್ಮದ್ ಇಮಾಂ ಸಾಹೇಬರು ಸ್ವತಂತ್ರ ಭಾರತದ ಪೂರ್ವೋತ್ತರಗಳನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದರು. 35 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಜನರ ಪ್ರೀತಿ ವಿಶ್ವಾಸಗಳಿಂದ ಇಮ್ಮಣ್ಣ ಎಂದೇ ಖ್ಯಾತಿಯಾಗಿದ್ದ ಜೆ.ಮಹಮದ್ ಇಮಾಂ, ಬಸವಾದಿ ಶರಣರ ಪ್ರಜಾಸತ್ತಾತ್ಮಕ ಮೌಲ್ಯಗಳ ಪ್ರತಿಪಾದಕರಾಗಿ ನುಡಿದಂತೆ ನಡೆದ ಮಹಾನ್ ಮಾನವತಾವಾದಿ ಎಂದರು.
ರಾಜಪ್ರಭುತ್ವ, ಪ್ರಜಾಪ್ರಭುತ್ವ ಕಂಡಿದ್ದ ಮುತ್ಸದ್ದಿ ಇಮಾಂ ಹೆಸರಿನ ಪ್ರಶಸ್ತಿಗೆ ನಾನು ಅರ್ಹನಲ್ಲ. ಅಳುಕಿನಿಂದಲೇ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ.ಸ್ವಾತಂತ್ರ್ಯದ ನಂತರ ಸಮಾಜವಾದಿ ಪಕ್ಷದಿಂದ ಗುರುತಿಸಿಕೊಂಡು ವಿರೋಧ ಪಕ್ಷದ ನಾಯಕರಾಗಿದ್ದರು.ಅಂದಿನ ರಾಜಕಾರಣ ರಚನಾತ್ಮಕವಾಗಿತ್ತು. ಜನಪರವಾದ ವಿರೋಧ ಪಕ್ಷವಿತ್ತು. ಅವರು ರಾಜ ಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಎರಡನ್ನೂ ಕಂಡವರಾಗಿದ್ದರು’ ಎಂದು ಪ್ರಶಸ್ತಿ ಸ್ವೀಕರಿಸಿದ ವೈ.ಎಸ್.ವಿ. ದತ್ತ ಅಭಿಪ್ರಾಯಪಟ್ಟರು.
‘ಮೈಸೂರು ರಾಜರ ಆಡಳಿತದಲ್ಲಿ ವಿವಿಧ ಇಲಾಖೆಗಳ ಮಂತ್ರಿಯಾಗಿದ್ದ ಅವರು, ಅಪಾರ ವಿದ್ವತ್ ಹೊಂದಿದ್ದರು. ಕೆಂಗಲ್ ಹನುಮಂತಯ್ಯರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಇಮಾಂ ಸಾಹೇಬರು ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಕೆತ್ತಲು ಸಲಹೆ ನೀಡಿದವರು. ಸರ್ಕಾರದ ಸೇವೆಯನ್ನು ದೇವರ ಸೇವೆಯನ್ನಾಗಿ ಸುವ ಘೋಷವಾಕ್ಯವಾಗಿತ್ತು. ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಮರ್ಥರೂ ಅಸಹಾಯಕರಾಗಿ ದ್ದಾರೆ. ಮನಸ್ಸಿನೊಳಗೆ ತುಡಿತ ಗಳಿವೆ ಆದರೆ ಚುನಾವಣೆ ರಾಜಕಾರಣದಿಂದ ನಮಗರಿಯದೆ ಮೈಲಿಗೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ದತ್ತವಿಷಾದ ವ್ಯಕ್ತಪಡಿಸಿದರು.
ಸರ್ವಧರ್ಮೀಯರ ಪ್ರೀತಿ ವಿಶ್ವಾಸ ಗಳಿಸಿದ್ದ ಇಮ್ಮಣ್ಣ
ಶಾಸಕ ದೇವೇಂದ್ರಪ್ಪ ಮಾತನಾಡಿ ಇಮಾಂ ಸಾಹೇಬರಕೊಡುಗೆಯಾಗಿರುವ ತಾಲ್ಲೂಕಿನ ಸಂಗೇನಹಳ್ಳಿ ಹಾಗೂ ಗಡಿಮಾಕುಂಟೆ, ತುಪ್ಪದಹಳ್ಳಿ ಕೆರೆಗಳು ಇಂದಿಗೂ ಜೀವಂತ ಸಾಕ್ಷಿಯಾಗಿವೆ. ಇಸ್ಲಾಂ ಧರ್ಮದಲ್ಲಿ ಜನಿಸಿದ್ದರೂ ಅವರು ನಾಡಿನ ಸರ್ವಧರ್ಮೀಯರ ಪ್ರೀತಿ ವಿಶ್ವಾಸಗಳಿಸಿದ್ದರು. ಇಮ್ಮಣ್ಣ ಎಂದೇ ಪ್ರಸಿದ್ದಿ ಹೊಂದಿದ್ದರು. ಅವರ ಹಾದಿಯಲ್ಲಿಯೇ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶ್ರಮಿಸುತ್ತೇನೆ. ‘ಇಮಾಂ ಸಾಹೇಬರ ಮೊದಲ ಬಾರಿ ಅಧ್ಯಕ್ಷರಾಗಿದ್ದ ಪಟ್ಟಣದ ಹೃದಯಭಾಗದಲ್ಲಿನ ಪಟ್ಟಣ ಪಂಚಾಯಿತಿ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಅದನ್ನು ಸುಂದರವಾಗಿ ವಿನ್ಯಾಸಗೊಳಿಸಿ, ಜನಸಂಪರ್ಕ ಕಚೇರಿ ಹಾಗೂ ಸುಸಜ್ಜಿತ ಗ್ರಂಥಾಲಯಆರಂಭಿಸಲಾಗಿದೆ. ಶೀಘ್ರದಲ್ಲಿ ಸಿರಿಗೆರೆ ಶ್ರೀಗಳ ಸಾನ್ನಿಧ್ಯದಲ್ಲಿ ಕಟ್ಟಡದ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್, ಗೌರವಾಧ್ಯಕ್ಷ ಹಾಜಿ ಜೆ.ಕೆ.ಹುಸೇನ್ ಮಿಯ್ಯಾ ಸಾಬ್, ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಇಮಾಂ ಸಾಹೇಬರ ಮೊಮ್ಮಗಳು ಚಮಾನ್ ಬೀ. ಫರ್ಜಾನ, ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಖಲೀಲ್ ಸಾಹೇಬ್, ಮುಖ್ಯ ಶಿಕ್ಷಕ ಜೆ.ಎಆರ್. ಶಂಕರ್, ಜೆ.ಕೆ. ಮಹಮದ್ ಹುಸೇನ್, ಹಲೀಮಾಬೀ, ಸಾಹಿತಿಗಳಾದ ಎನ್.ಟಿ.ಯರ್ರಿಸ್ವಾಮಿ, ಪ್ರಾಂಶುಪಾಲ ದಾದಾಪೀರ್ ನವಿಲೆಹಾಳ್, ಯಾದವರೆಡ್ಡಿ ಇತರರು ಇದ್ದರು.





Leave a comment