ಬೆಳಗಾವಿ: ನದಿಯ ಪಾತ್ರದಲ್ಲಿರುವ ನಗರಸಭೆ, ಪುರಸಭೆ, ಹಳ್ಳಿಗಳ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಗೃಹತ್ಯಾಜ್ಯ ನೀರು ನೇರವಾಗಿ ಅಥವಾ ಪರೋಕ್ಷವಾಗಿ ರಾಜ್ಯದ 12 ನದಿಗಳಿಗೆ ಸೇರುತ್ತಿದ್ದು, ಇದರಿಂದ ನದಿ ನೀರು ಮಾಲಿನ್ಯವಾಗುತ್ತಿದೆ.
ಮಲಿನಗೊಂಡಿರುವ ನದಿ ನೀರಿನ ಬಳಕೆಯಿಂದ ಸಾರ್ವಜನಿಕರ ಆರೋಗ್ಯ ಹದಗೆಟ್ಟು ಜೀವಹಾನಿ ಉಂಟಾಗದಂತೆ ಮಲಿನಗೊಂಡಿರುವ ನದಿಗಳನ್ನು ಪುನರುಜ್ಜೀವನಗೊಳಿಸಲು ಸಮಯಾಧಾರಿತ ಕ್ರಿಯಾ ಯೋಜನೆಯನ್ನು ತಯಾರಿಸಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಂಜೂರಾತಿ ಪಡೆದು 2019-2020 ರಿಂದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ನಿಯಂತ್ರಣ ಮತ್ತು ನಿವಾರಣಾ) ಕಾಯ್ದೆ -1974 ಅನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದು, ಕೈಗಾರಿಕೆಗಳಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಯುಕ್ತ ನೀರನ್ನು ಸಂಸ್ಕರಿಸಿ, ಪುನರ್ಬಳಕೆ ಮಾಡಬೇಕೆಂದು ಸೂಚಿಸಿ, ಜಲ ಮಾಲಿನ್ಯ (ನಿಯಂತ್ರಣ ಮತ್ತು ನಿವಾರಣಾ) ಕಾಯ್ದೆ-1974ರ ಅಡಿಯಲ್ಲಿ ಸೆಕ್ಷನ್ 25 ಮತ್ತು 26ರ ಅಡಿಯಲ್ಲಿ ಸ್ಥಾಪನಾ ಅನುಮತಿ ಪತ್ರ ಮತ್ತು ಕಾರ್ಯಾಚರಣಾ ಸಮ್ಮತಿ ಪತ್ರಗಳನ್ನು ನೀಡುತ್ತಿದೆ. ಸಮ್ಮತಿ ಪತ್ರದಲ್ಲಿ ಇರುವ ಅನುಬಂಧಗಳ ಪ್ರಕಾರ, ಎಲ್ಲಾ ಕೈಗಾರಿಕೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸುವ ಸಲುವಾಗಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಂಡು ನಿಗದಿತ ಗುಣಮಾನಕಗಳಿಗೆ ಸಂಸ್ಕರಿಸಿ / ಶುದ್ಧಿಕರಿಸಿ ಮರುಬಳಕೆ ಮಾಡುವುದು ಕೈಗಾರಿಕೆಗಳ ಕರ್ತವ್ಯವಾಗಿರುತ್ತದೆ.
ನದಿಗಳ ಮಾಲಿನ್ಯಕ್ಕೆ ಮುಖ್ಯವಾಗಿ ಕಾರಣವಾಗಿರುವ ಜನವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ರೊಚ್ಚು ನೀರನ್ನು ನದಿಗೆ ಬಿಡುತ್ತಿರುವುದನ್ನು ತಡೆಗಟ್ಟಿ ಸಂಪೂರ್ಣವಾಗಿ ಸಂಸ್ಕರಿಸಿ ಪುನರ್ಬಳಕೆಯ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರ ಉತ್ತರಿಸಿದರು.





Leave a comment