Home ದಾವಣಗೆರೆ ಪೂಜ್ಯ ತ್ರಯರನ್ನು ಒಂದೇ ವೇದಿಕೆಗೆ ಕರೆ ತಂದ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರ….!
ದಾವಣಗೆರೆನವದೆಹಲಿಬೆಂಗಳೂರು

ಪೂಜ್ಯ ತ್ರಯರನ್ನು ಒಂದೇ ವೇದಿಕೆಗೆ ಕರೆ ತಂದ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರ….!

Share
ಶಾಮನೂರು ಶಿವಶಂಕರಪ್ಪ
Share

SUDDIKSHANA KANNADA NEWS/DAVANAGERE/DATE:15_12_2025

ದಾವಣಗೆರೆ: ಧಣಿವರಿಯದ ದಾವಣಗೆರೆಯ ಕೊಡುಗೈ ಧಣಿ, ಗುರು ಸೇವಾ ಕೈಂಕರ್ಯ ನಿಷ್ಠರು, ನಮ್ಮ ಸಮಾಜದ ಆಲದ ಮರದದಂತಿದ್ದ ಶಾಮನೂರು ಶಿವಶಂಕರಪ್ಪನವರು ಶಿವನ ವಾರ ಸೋಮವಾರ ದಿನವಾದ ಇಂದೇ ಮಲ್ಲಿಗೆಯ ರೂಪದಲ್ಲಿ ಶಿವನ ಪಾದಕ್ಕೆ ಸಮರ್ಪಿತರಾದರು‌.

ಈ ಸುದ್ದಿಯನ್ನೂ ಓದಿಮಣ್ಣಲ್ಲಿ ಮಣ್ಣಾದ ಮಾಣಿಕ್ಯ: ಶಿವ ಪಾರ್ವತಿ ಪದ್ಧತಿಯಂತೆ ಶಾಮನೂರು ಶಿವಶಂಕರಪ್ಪರ ಅಂತ್ಯ ಸಂಸ್ಕಾರ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯದಲ್ಲಿ ನಮ್ಮ ಶಾಖಾ ಮಠಗಳಾದ ಸಾಣೇಹಳ್ಳಿ ಶಾಖಾ ಮಠದ ಪೂಜ್ಯರಾದ ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಹರಳಕಟ್ಟ ಶಾಖಾ ಮಠದ ಪೂಜ್ಯರಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳವರನ್ನು ಒಂದೇ ವೇದಿಕೆಯಲ್ಲಿ ನೋಡುವ ಆಸೆಯು ಸಮಾಜಭಾಂಧವರ ಒತ್ತಾಸೆಯಂತೆ ಅವರದಾಗಿತ್ತು.

ಶಾಮನೂರು ಶಿವಶಂಕರಪ್ಪನವರು ನಿನ್ನೆ ಸಂಜೆ ಬಯಲಾದ ಕ್ಷಣದಿಂದಲೂ ನಮ್ಮ ಶ್ರೀ ಜಗದ್ಗುರುಗಳವರು ನ್ಯಾಯ ಪೀಠವನ್ನು ರದ್ದುಮಾಡಿ ಶಾಮನೂರು ಕುಟುಂಬದೊಟ್ಟಿಗೆ ಮುಂದಿನ ವಿಧಿವಿಧಾನಗಳು ಬಗ್ಗೆ ಚರ್ಚಿಸಿದರು, ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, ಪೂಜ್ಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರು ನಿನ್ನೆ ಸಂಜೆಯಿಂದಲೂ ದಾವಣಗೆರೆಯಲ್ಲಿ ನಡೆಯಲಿರುವ ಅಂತಿಮ ಸಂಸ್ಕಾರದ ರೂಪು ರೇಷೆಗಳನ್ನು ಪರಿಶೀಲಿಸಿದರು.

ಅನೇಕ ಬಾರಿ ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ ಪ್ರಯತ್ನಗಳು ನಡೆದರು ಪೂಜ್ಯರುಗಳು ಹೊಂದಿರುವ ಶಿವ ನಿಷ್ಠೆಯ ಸಿದ್ದಾಂತಗಳು, ನೈತಿಕ ಗಟ್ಟಿತನದ ನಿಲುವುಗಳ ಪರಿಣಾಮ ಕಾರ್ಯ ಸಾಧುವಾಗಿರಲಿಲ್ಲ. ಶಿವಶಂಕರಪ್ಪನವರ ಗುರು ಭಕ್ತಿಯ ದ್ಯೋತಕವು ಸಾಕ್ಷಾತ್ಕಾರ ಎಂಬಂತೆ‌ ಭಕ್ತ ಕಂಪಿತ ನಮ್ಮ ಕೂಡಲಸಂಗಮದೇವ ಎಂಬ ವಚನ ವಾರಿಧಿಗೆ ಭಾಷ್ಯ ಬರೆದಂತೆ ಶಿವಶಂಕರಪ್ಪನವರ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಪೂಜ್ಯ ತ್ರಯರುಗಳು ಭಾಗಿಯಾಗಿ ಶಿಷ್ಯ ಪ್ರಮುಖರಾದ ಶಾಮನೂರು ಶಿವಶಂಕರಪ್ಪರವರ ಆಸೆಯಂತೆ ಒಗ್ಗೂಡಿರುವ ಈ ಚಿತ್ರಪಟವು ಕಣ್ಣಾಲಿಗಳನ್ನು ತರಿಸುತ್ತಿದೆ.

ಪೂಜ್ಯ ತ್ರಯರುಗಳು ನಮ್ಮ ಮಠದ ಸಂಸ್ಥಾಪನಾಚರ್ಯ ವಿಶ್ವಬಂಧು ಮರುಳಸಿದ್ದರ ಅನುಗ್ರಹ ಆಣತಿಯಂತೆ ಲಕ್ಷಾಂತರ ಅಭಿಮಾನಿ,ಹಿತೈಷಿಗಳ ಸಮಾಗಮದಲ್ಲಿ ಏಕತಾ ಮನಸ್ಸಿನಿಂದ , ಸಂಕಲ್ಪ ಪಾದೋದಕಗೈದು, ಶಿವಶಂಕರಪ್ಪನವರ ಅಂತಿಮ ವಿಧಿ ವಿಧಾನಗಳನ್ನು, ಕ್ರೀಯಾ ಸಮಾಧಿ,ಲಿಂಗೈಕ್ಯ ಸಂಸ್ಕಾರಗಳ ನೇತೃತ್ವ ವಹಿಸಿ ಚಿರಶಾಂತಿ ಕೋರಿದ್ದು, ನಿಜಕ್ಕೂ ಸಾರ್ಥಕ ಎನಿಸಿತು.

ಸದಾ ಸರ್ವರ ಅಭ್ಯುದಯಕ್ಕೆ ಬಾಳಿದ ಹಿರಿಯ ಜೀವ ಮಡಿದ ಮೇಲೂ ಸಮಾಜ ಬಾಂಧವರ ಆಸೆಯನ್ನು ಈಡೇರಿಸಿದ್ದು ನಿಜಕ್ಕೂ ಪವಾಡವೇ ಸರಿ

ನಮ್ಮ ಮಠದ ಹಿರಿಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮಾತಿನ ಸಂವಿಧಾನದಂತೆ ಗುರುವಿಗಂಜಿ ಶಿಷ್ಯರು , ಶಿಷರಿಗಂಜಿ ಗುರುವು’ ನಡೆಯ ಬೇಕೆನ್ನುವ ಆದರ್ಶವು ಮತ್ತೊಮ್ಮೆ ಶಾಮನೂರು ಶಿವಶಂಕರಪ್ಪನವರ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಸಾಬೀತಾಗಿದೆ.

ಶಾಮನೂರು ಶಿವಶಂಕರಪ್ಪನವರ ಆದರ್ಶ ತತ್ವಗಳ ಅಡಿಯಲ್ಲಿ ಸಮಾಜ ಮಹಾ ಬೆಳಕಿನಲ್ಲಿ ಪ್ರಜ್ವಲಿಸಲಿ…… ಶ್ರೀ ತರಳಬಾಳು ಗುರು ಪರಂಪರೆಗೆ ಜಯವಾಗಲಿ……

Share

Leave a comment

Leave a Reply

Your email address will not be published. Required fields are marked *