SUDDIKSHANA KANNADA NEWS/DAVANAGERE/DATE:11_12_2025
ದಾವಣಗೆರೆ: ವಿಕಲಚೇತನರಿಗೆ ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು ಕನಿಷ್ಟ 5 ಸಾವಿರ ರೂ, ಗಳಿಗೆ ಹೆಚ್ಚಿಸುವುದು, ವಿಕಲಚೇತನರಿಗೆ ರಾಜಕೀಯ ಪ್ರಾತಿನಿಧ್ಯ, ಹಾಗೂ ವಿಕಲಚೇತನರ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಆರ್ ಪಿಡಿ ಟಾಸ್ಕ್ ಪೋರ್ಸ್ ಸಂಘಟನೆಯು ಡಿ.17 ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.
ಕೇಂದ್ರ ಸರ್ಕಾರ ವಿಕಲಚೇತನರ ಹಕ್ಕುಗಳ ಕಾಯಿದೆ ಜಾರಿಗೊಳಿಸಿ 9 ವರ್ಷಗಳು ಕಳೆದರು ಕರ್ನಾಟಕ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಕಾಯಿದೆ ಸಂಪೂರ್ಣವಾಗಿ ಜಾರಿಗೆ ಬರದ ಕಾರಣ ವಿಕಲಚೇತನರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರುವಲ್ಲಿ ಸಾಧ್ಯವಾಗಿಲ್ಲ ಎಂದು ಸಂಘಟನೆಯ ರಾಜ್ಯ ಗೌರವಾಧ್ಯಕ್ಷರಾದ ಎಂ. ವಿಜಯಲಕ್ಷ್ಮಿ ಪತ್ರಿಕಾ ಹೇಳಿಕೆಯಲ್ಲಿ ಬೇಸರ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರ ಕಳೆದ 2 ಬಜೆಟ್ನಲ್ಲಿ ವಿಕಲಚೇತನರ ಯಾವುದೇ ಪ್ರಮುಖ ಬೇಡಿಕೆಗಳನ್ನು ಈಡೇರಿಸದೇ ವಿಕಲಚೇತನರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೂಡಲೇ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ವಿಕಲಚೇತನರಿಗೆ ಶೇ.5 ರಷ್ಟು ಅನುದಾನವನ್ನು ಮೀಸಲಿಡಬೇಕು, ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸಿನ ಪ್ರಯಾಣದ ಮೀತಿಯನ್ನು ಹೆಚ್ಚಿಸುವುದು ಸೇರಿದಂತೆ ಹಲವು ಪ್ರಮುಖ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.





Leave a comment