Home ಕ್ರೈಂ ನ್ಯೂಸ್ 518 ಕಡೆ ಆರ್ ಎಸ್ ಎಸ್ ಪಥ ಸಂಚಲನ ಶಾಂತಿಯುತ: ಪ್ರಿಯಾಂಕ್ ಖರ್ಗೆ ಮಿಥ್ಯಾರೋಪ ಬಿಟ್ಟು ಸಂಘದೊಳಗೆ ಬಂದು ನೋಡಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

518 ಕಡೆ ಆರ್ ಎಸ್ ಎಸ್ ಪಥ ಸಂಚಲನ ಶಾಂತಿಯುತ: ಪ್ರಿಯಾಂಕ್ ಖರ್ಗೆ ಮಿಥ್ಯಾರೋಪ ಬಿಟ್ಟು ಸಂಘದೊಳಗೆ ಬಂದು ನೋಡಿ!

Share
Share

ಬೆಂಗಳೂರು: ರಾಜ್ಯದಲ್ಲಿ ಆರೆಸ್ಸೆಸ್ ಪಥ ಸಂಚಲನಕ್ಕೆ ಪದೆ ಪದೇ ಅಡ್ಡಿಯನ್ನುಂಟು ಮಾಡಿ ಕೋರ್ಟ್ ಮೂಲಕ ಛೀಮಾರಿ ಹಾಕಿಸಿಕೊಂಡ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಖಭಂಗವಾಗಿದೆ ಎಂದು ಬಿಜೆಪಿ ಟಾಂಗ್ ನೀಡಿದೆ.

ಬೆಳಗಾವಿಯ ಅಧಿವೇಶನದಲ್ಲಿ ಗೃಹಸಚಿವರು ನೀಡಿದ ಉತ್ತರವು ಆರೆಸ್ಸ್‌ಸ್ ಸಂಘಟನೆಯ ಶಿಸ್ತಿಗೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ. ರಾಜ್ಯದಲ್ಲಿ 518 ಕಡೆಗಳಲ್ಲಿ ಸಂಘ ಶತಾಬ್ದಿ ಹಿನ್ನೆಲೆಯಲ್ಲಿ ನಡೆದ ಪಥಸಂಚಲನದಲ್ಲಿ ಲಕ್ಷಾಂತರ ಸ್ವಯಂಸೇವಕರು ಭಾಗವಹಿಸಿದ್ದು ಎಲ್ಲಿಯೂ ಕೂಡ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ. ಇದಕ್ಕಿಂತ ಸಂಘದ ಶಕ್ತಿ ಮತ್ತು ಶಿಸ್ತಿಗೆ ನಿದರ್ಶನ ಬೇಕೇ ಎಂದು
ಪ್ರಶ್ನಿಸಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರೇ ಪ್ರಚಾರಕ್ಕಾಗಿ ಆರೆಸ್ಸೆಸ್ ಕುರಿತು ದೂರದಿಂದ ನಿಂತು ಪ್ರತಿನಿತ್ಯ ಮಿಥ್ಯಾರೋಪ ಮಾಡುವ ಬದಲು ಸಂಘದೊಳಗಡೆ ಬಂದು ನೋಡಿ ಎಂದು ಸಲಹೆ ನೀಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದು, ರಾಜ್ಯದಾದ್ಯಂತ 518 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ಯಶಸ್ವಿಯಾಗಿ ನಡೆದಿದ್ದು, “ಯಾವುದೇ ಗಲಾಟೆ, ದೊಂಬಿ ನಡೆದಿಲ್ಲ” ಎಂದು ರಾಜ್ಯ ಗೃಹ ಇಲಾಖೆ, ವಿಧಾನಸಭೆಯಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ದೇಶಭಕ್ತಿ, ದೇಶಸೇವೆಗಳಿಗೆ ಸಮರ್ಪಿತ ಸಂಘಟನೆಯ ಶಿಸ್ತು, ಬದ್ಧತೆಗಳಿಗೆ ಸಾಕ್ಷಿ ಬೇಕಿಲ್ಲ. ಆದರೆ ಕೆಲವರ ಕೀಳು ರಾಜಕೀಯ, ತುಷ್ಟೀಕರಣದ ಹಪಾಹಪಿಗಳಿಂದ ಸಂಘದ ಪಥಸಂಚಲನಕ್ಕೆ ಅಡ್ಡಿಪಡಿಸಲು ವಿಫಲ ಯತ್ನ ನಡೆಸಿ, ಕೊನೆಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ಮಂದಿಗೆ, ತಮ್ಮದೇ ಸರ್ಕಾರದ ಈ ಅಧಿಕೃತ ವರದಿಯಿಂದಲಾದರೂ ಕಣ್ಣಿನ ಮಂಜು ಕರಗುವಂತಾಗಲಿ
ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *